ಶುಕ್ರವಾರ, ಸೆಪ್ಟೆಂಬರ್ 6, 2013

ತಿಳಿನೀರಿನಾಳ!



ಕೋಡಿಯೊಡೆದ ಕೆರೆಯು ನೀರು
ಓಡುವಂತ ಮನಸಿದು.
ಗಡಿಯ ಮೀರಿ ಹರಿದು ಸುತ್ತ
ರಾಡಿ ಮಾಡುವಂತಿದು.

ತಿಳಿಯ ನೀರನಿರಿಸಿ ಮೇಲೆ
ಕೊಳೆಯನೊಳಗೆ ತುಂಬಿದೆ.
ಒಳ್ಳೆತನದ ಸುಳ್ಳ ಹಿಂದೆ
ಕಳ್ಳತನವು ಅಡಗಿದೆ.

ಕಣ್ಣ ಸೆಳೆಯುವಂತ ನೀಲ
ಬಣ್ಣದಂತ ಚೆಲುವಿದೆ.
ಅಲೆಯ ಮೇಲೆ ಬಿಳಿಯ ಹಂಸ
ತೇಲುವಂತೆ ಕಂಡಿದೆ.

ಕಮಲಹೂವಿನಾಳಕಿಳಿಯೆ
ಅಮಲ ಜಲವು ಎಲ್ಲಿದೆ?
ಹೂಳುಯಿರದೆ ಕಮಲವಿಲ್ಲ
ನಗುವಿನಾಳ ಹೇಗಿದೆ?

ಗೋಡೆಯೊಂದು ನೆಪವು ಮನಕೆ
ತಡೆಯೆ ಇಲ್ಲ ಓಟಕೆ.
ಹೊರಗೆ ಕಂಡ ತಿಳಿಯು ಇಲ್ಲ
ಕೆರೆಯ ತಳದ ಕೆಸರಿಗೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ