ಯಾವ ಚೇತನ ಕರೆದು ಎನ್ನನು
ಜೀವಭಾವಕೆ ತಂದಿತು?
ನೋವು-ನಲಿವಿನ ಅಲೆಯ ಕಡಲಿಗೆ
ಯಾವ ತಳವನು ಇಟ್ಟಿತು?
ಅಲೆಯು ಇಳಿಯಲು ನೋವ ನೊರೆಗಳ
ನಲಿವ ಗುಳ್ಳೆಯು ನಕ್ಕಿತು.
ಅಳು-ನಗುಗಳಾ ಲವಣಜಲದಲಿ
ಮುಳುಗಿಸೇಳಿಸಿ ನೋಡಿತು.
ಎದೆಯ ಉಸಿರಲಿ ಚಿಗುರು ಆಸೆಯ
ತಿದಿಯ ತಿರುಗಿಸಿ ಬಿಟ್ಟಿತು.
ಮೇಲೆ ಏರಲು ತಳಕೆ ನೂಕಿತು
ಕೆಳಗೆ ಬೀಳಲು ಎತ್ತಿತು.
ಯಾವ ಅರ್ಥವ ಎಲ್ಲಿ ಇಟ್ಟಿತೋ?
ಯಾವ ತತ್ತ್ವದಿ ಹುಟ್ಟಿತೋ?
‘ನಾನು- ನನ್ನದು’ ಎಂಬ ಗರಿಮೆಯು
ನನ್ನಲೇತಕೆ ಸೊಕ್ಕಿತೋ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ