‘ಎಲ್ಲ ಬೇಕು’ ಎಂಬುದೇಕೆ?
ಬೇಲಿ ಹಾಕು ಮನಸಿಗೆ.
ನನ್ನದೆಂಬ ಮುಳ್ಳು ಗಡಿಯ
ಕಿತ್ತು ಎಸೆದು ಬಯಲಿಗೆ.
‘ಎಲ್ಲ ಗೊತ್ತು’ ಎಂಬ ಭಾವ
ಅಳಿಸಿ ಹಾಕು ಅರಿವಲಿ.
‘ನಾನು’ ಎಂಬ ಬೇಡಿ ಕಳಚಿ
ಮುಕ್ತಿ ಹೊಂದು ಕ್ಷಣದಲಿ.
ಬಯಕೆಗಳನು ಹೊತ್ತು ಹೆತ್ತು
ಬೆವರಬೇಡ ಎದೆಯಲಿ.
ಸಿರಿಯ ತಂದು ನೇಯ್ಗೆ ನೇಯ್ದು
ಸಿಲುಕಬೇಡ ಬಲೆಯಲಿ.
ಒಳಗೆ ಕುದಿದು ಬೇಯಬೇಡ
ಕಳೆವುದೆಂಬ ದುಗುಡಕೆ.
ಬೆಂಕಿಯನ್ನೆ ಭಸ್ಮ ಮಾಡು
ಬಿಂಕವೇಕೆ ಬಾಳಿಗೆ?
ಭಾವ ತುಂಬಿ ಬಾಗಿ ನಮಿಸಿ
ದೇವನಿಯತ ಸೃಷ್ಟಿಗೆ.
ಎಲ್ಲೆ ಮೀರಿ ಹಗುರವಾಗಿ
ಮೇಲಕೇರು ಮುಗಿಲಿಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ