ಛಂದಾವರಣದಿ ಬಂಧಿತವಾಗಿರೆ
ಭಾವಾಲಾಪದ ಅನುರಣನ.
ಸಂಧ್ಯಾರಾಗಾಲೇಪಿತ
ಹೃದಯದಿ
ಅರುಣೋದಯ ನವ ಆವರಣ.
ಚಿತ್ತವೃತ್ತಿಗಳಾ ಚಿತ್ರಿತಕುಸುಮದಿ
ಮಧುರಾಕ್ಷರಗಳ ಸಂಮಿಲನ.
ಸ್ವರಮಧುಕರಗಳು ಚುಂಬಿಸೆ
ಪುಷ್ಪವ
ತನುಮನವ್ಯಂಜನವ್ಯಾಕರಣ.
ಕರ್ಣಾಲಿಂಗಿತ ಝಂಕೃತಿಪದಗಳ
ನಿಯತಾವರ್ತದ ಸಂಚರಣ.
ನಾದರತೋತ್ಸವಪುಳಕಿತ
ವದನದಿ
ಕವಿತಾಸಂತತಿಸಂಜನನ.
ಅಣುರೇಣುಗಳಾ ಅಂತಃಕರಣವೆ
ವೀಣಾಪಾಣಿಯ ಸಂಸದನ.
ಕಣಕಣಕಂಪಿತ ನುತಸ್ವರಗಣಗಳೆ
ವಾಣಿಗೆ ಅರ್ಪಿತ ಆಭರಣ.
ಡಿ.ನಂಜುಂಡ.
17/9/2013
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ