ಗುರುವಾರ, ಅಕ್ಟೋಬರ್ 24, 2013

ಡಮರುಗದ ನುಡಿಯಂತೆ ಕೇಳಾ



ಗಡಿಗೆಯೊಳು ಆಡುತಿಹ ಪಡಿಯಕ್ಕಿ ನೋಡ
ಅಡಿಗಡಿಗೆ ಡಮರುಗದ ನುಡಿಯಂತೆ ಕೇಳಾ

ಗುಡಿಯ ನಡುವಿನ ಕಲ್ಲ ಬಿಡದೆಯರ್ಚಿಸಿ ನಿತ್ಯ
ಬೇಡುವೆವು ವರಗಳನು ಮೂಢರಂತೆ.
ಜೋಡೆತ್ತುಗಳ ಕಟ್ಟಿ ಹೂಡಿ ಹೊಲದಲಿ ಬಿತ್ತಿ
ಪಡಿಯಿತ್ತು ಪೊರೆವವನ ಕಡೆಗಣಿಸುತ.

ನೋಡಿ ಸಿರಿಗಳ ಹರಿಯ ಸಡಗರದಿ ಮಗಳಿತ್ತ
ಕಡಲಿನೊಡೆಯನು ಅಂದು ಮಥಿಸಿ ಮನದಿ.
ಕಡೆದು ಉದಿಸಿದ ವಿಷವ ಕುಡಿದಿಹನು ಆ ಹರನು
ಬೇಡನಾಗಿಹನೆಂದು ಕೊಟ್ಟನವಗೆ.

ಅಡಿಕೆಸೋಗೆಯ ಮಾಡು ತಡಿಕೆಯಂದವ ನೋಡು
ಗುಡಿಸಲೊಳಗಿನ ಬದುಕ ಇಣುಕಿಯಿಣುಕಿ.
ಬಡಶಿವನು ನಿಂತಿಹನು ಜಡಿಮಳೆಗೆ ತಲೆಕೊಟ್ಟು
ಹಿಡಿಯುತಲಿ ಗಂಗೆಯನು ಕೆಂಜಡೆಯಲಿ.

ಮಡಿಯುಟ್ಟು ಪಠಿಸಿದೊಡೆ ಬಡಬಡನೆ ಮಂತ್ರಗಳ
ಸುಡುವ ಒಡಲಿನ ಕಿಡಿಯು ತಣಿಯದೆಂದೂ.
ಕೊಡುಗೈಯ ದೇವತೆಯ ಬೇಡೋಣ ಪೊಡಮೊಟ್ಟು
ಎಡಬಿಡದೆ ಕೊಡುವವನು ಕಾಳುಕಡಿಯ.

ಡಿ.ನಂಜುಂಡ
25/10/2013

2 ಕಾಮೆಂಟ್‌ಗಳು:

  1. ವ್ಹಾ :) ನಿಮ್ಮ ಕವಿತೆಗಳ ಸೊಗಸು ಲಯಬದ್ಧ ಗೇಯತೆಯಲ್ಲಿ ಎಂಬುದನ್ನು ಬಲ್ಲೆ. ಆದರೆ ಬಹಳ ದಿನಗಳ ನಂತರ ಓದುತ್ತಿರುವುದರಿಂದ ಮೊದಲಿಗಿಂತ ರುಚಿಸಿತು. ಶಿವ ಡಮರುಗದ ನಿನಾದದಲ್ಲಿ ಅಡಗಿ ಕುಳಿತಿದ್ದಾನೆ. ಡಮರುಗ ಬಡಿದಂತೆ ಶಿವನೆದ್ದು ಬರುತ್ತಾನೆ, ಭಕ್ತಿ ರಸ ಬೆರೆಸಿದರೆ ಸಾಕು :) ಚೆನ್ನಾಗಿದೆ.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
  2. ನಿಮ್ಮೆಲ್ಲರ ಪ್ರೋತ್ಸಾಹದಿಂದ ಬರೆಯುತ್ತಿರುವೆ. ಲಯಬದ್ಧವಲ್ಲದ ಕವಿತೆಗಳನ್ನು ಬರೆಯುವ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಧನ್ಯವಾದಗಳು ಪ್ರಸಾದ್ ರವರೇ..

    ಪ್ರತ್ಯುತ್ತರಅಳಿಸಿ