ಭಾನುವಾರ, ಜೂನ್ 1, 2014

ಈಗಲೇ ಬಾ, ಎದೆಗೂಡಿಗೆ!

ಒಂದು ದಿನ ತನುವಳಿದು
ನೆಲಕುರುಳಿ ಮಣ್ಣಾಗಿ
ಕಣ್ಣ ನೋಟವು ಕಳಚಿ ಕಾಣೆಯಾಗೆ
ಹೇಗೆ ನೋಡಲಿ ಅಂದು
ವನದೇವಿ! ನಿನ ಸೊಬಗ
ಈಗಲೇ ಬಾ ಎನ್ನ ಎದೆಗೂಡಿಗೆ

ಹಸಿರನುಸಿರಲಿ ತುಂಬಿ
ಕುಣಿಕುಣಿದು ನಲಿದಾಡು
ಉಲ್ಲಾಸರಸವುಕ್ಕಿ ಚಿಮ್ಮುವಂತೆ
ಕಣಕಣದಿ ಸಂಚರಿಸಿ
ಪ್ರೇಮದಂಕುರವಿರಿಸಿ
ಅಡಿಯಿಂದ ಮುಡಿಗೇರು ಬಳ್ಳಿಯಂತೆ

ಭಾವಲತೆಗಳು ಚಿಗುರಿ
ನಳನಳಿಪ ಪೂವಿಡಲಿ
ಬಾಳ ಹಾದಿಯ ತುಂಬ ಘಮಿಸುತಿರಲಿ
ಸುಖದುಃಖದೊಳಹೊಕ್ಕು
ಸಮಚಿತ್ತವೀಯುತಲಿ
ಮತಿಯ ಮಾತಿನ ತುದಿಗೆ ಫಲವನಿಡಲಿ

ಅನುಭವವು ಹಣ್ಣಾಗಿ
ತನುಭಾವವಳಿಯುತಿರೆ
ನಿತ್ಯಮುಕ್ತತೆಯರಿವು ಹರಿವಾಗಲಿ
ಮನದಾಳದೊಳು ಹೂತ
ಕೃತಕರ್ಮದುಳಿಕೆಗಳು
ಕೆಳಕುದುರಿ ನಿನ್ನಡಿಯ ಹುಡಿಯಾಗಲಿ.

ಡಿ.ನಂಜುಂಡ
01/06/2014


2 ಕಾಮೆಂಟ್‌ಗಳು:

  1. ಕಾಡೆಲ್ಲ ಸವರಿ ಇತ್ತಿತ್ತಲಾಗೆ ಒತ್ತುವರಿಯಾಗಿ, ಹಸಿರು ಬರಡಾಗಿ, ವನ್ಯ ಮೃಗಗಳು ಹಸಿವಿಗೆ ನೀರಡಿಕೆಗೆ ನಾಡಿಗೆ ಲಗ್ಗೆ ಇಡುತಿರುವ ಈ ಕೇಡ್ಗಾಲದಲಿ, ವನದೇವಿಗೆ ತಾವು ಸಲ್ಲಿಸಿರುವ ಈ ಪ್ರಾರ್ಥನೆ ಮನ ಮುಟ್ಟುವಂತಿದೆ.

    ಮನೋ ಪರಿವರ್ತಕ ಕವನ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅಭಿಮಾನದ ನುಡಿಗಳಿಗೆ ಕೃತಜ್ಞತೆಗಳು.. ಬದರೀನಾಥ್ ರವರೇ

    ಪ್ರತ್ಯುತ್ತರಅಳಿಸಿ