ಬಾ ಕನಸೆ! ಕುಣಿದಾಡು ಬಣ್ಣದೋಕುಳಿಯಾಡು
ಹೃದಯನವರಂಗದಾ ಕಿರುತೆರೆಯ ಮೇಲೆ
ಅರೆತುಂಬಿ ತುಳುಕಾಡುತಿರುವ ಮತಿಯನು ತುಂಬು
ನಿದ್ರೆಯೊಳು ತೆರೆಯುತಲಿ ನನಗೊಂದು ಶಾಲೆ
ನೀನಾಡುವಾ ಆಟ ನನಗಾಗುತಿರೆ ಪಾಠ
ಭಾವಪೂರ್ಣತೆಯೊಳಗೆ ಹರಿಯುವೆನು ನಾನು
ಎಚ್ಚರದಿ ನಿಲುಕದಾ ಆಗಸವ ಮುಟ್ಟುವೆನು
ಅರಿವಿನಾಳಗಲಗಳನರಿತು ಚಲಿಸುವೆನು
ಆಸೆಗಳ ಕಡಲಿನಾ ತೀರದೊಳು ನಿಲಿಸೆನ್ನ
ಸುಖದುಃಖದಲೆಗಳಿಗೆ
ಸಾಕ್ಷಿಯಾ ಹಾಗೆ
ಕರುಣಿಸೆನ್ನಯ ಮನಕೆ ಒಳಗಣ್ಣ ನೋಟವನು
ನಿನ್ನಾಟದೃಶ್ಯಗಳ ನೋಡುವಾ ಹಾಗೆ
ಕರ್ಮಫಲಗಳ ತೊಟ್ಟು ಕಳಚಿ ಬೀಳಲಿ ಬೇಗ
ಓದಿನಾ ಫಲಿತಾಂಶವದು
ಶೂನ್ಯವಾಗೆ
ಪೂರ್ಣತೆಯ ಪಾಠವನು ಕಲಿಸುತಲಿ ಕರಗೆನ್ನ
ನಿತ್ಯಮುಕ್ತಾನುಭವದಾನಂದದೊಳಗೆ.
ಡಿ.ನಂಜುಂಡ
23/05/2014
ಪೂರ್ಣತೆಯ ಪಾಠವನು ಕಲಿಸುತಲಿ ಕರಗೆನ್ನ
ಪ್ರತ್ಯುತ್ತರಅಳಿಸಿನಿತ್ಯಮುಕ್ತಾನುಭವದಾನಂದದೊಳಗೆ.. ಇಡೀ ಕವನವೇ ಸುಂದರ ಮತ್ತು ಬದುಕಿನಲಿ ಅಂತಿಮವಾಗಿ ಸಾಧಿಸಲು ಬಯಸಬೇಕಾದ ಪೂರ್ಣತೆಯ ಭಾವಕ್ಕೆ ಪೂರಕವಾದ ಈ ಸಾಲುಗಳು ಶುಭ್ರ ಲಲಾಟದಲ್ಲಿ ತಿಲಕವಿಟ್ಟಂತೆ, ಸುಂದರವಾಗಿವೆ.
ರವಿ ತಿರುಮಲೈರವರೇ... ನನ್ನೆಲ್ಲಾ ಕವಿತೆಗಳನ್ನೋದಿ ಪ್ರೋತ್ಸಾಹಿಸುತ್ತಿದ್ದೀರಿ. ಕೃತಜ್ಞತೆಗಳು
ಪ್ರತ್ಯುತ್ತರಅಳಿಸಿ