ಅರಳಲೀ ಅರಳಲೀ
ಹೃದಯಪುಷ್ಪವರಳಲಿ
ಮನವು ದುಂಬಿಯಂತೆ ಮುತ್ತಿ
ಝೇಂಕಾರವ ಗೈಯಲಿ
ಪ್ರೇಮರೇಣುಪರಾಗಕ್ಕೆ
ಜಗವನೆಲ್ಲ ಸುತ್ತಲಿ
ಹಳತುಗಳನು ಕಳಚಲಿ
ಹೊಸಹರುಷದಿ ಮೆರೆಯಲಿ
ಅಂತರಂಗಚೈತ್ರವನವು
ಪಸುರುಡೆಯನು ಧರಿಸಲಿ
ಕುಸುಮಪಾತ್ರೆಯೊಳಗೆ ಜೇನು
ತುಂಬಿ ತುಂಬಿ ತುಳುಕಲಿ
ಕಣಕಣದಲಿ ಉಲ್ಲಾಸವು
ಕುಣಿಯುತ ಸಂಚರಿಸಲಿ
ಓಂಕಾರವು ಮೊಳೆಯಲಿ
ಸಂಸ್ಕಾರವು ಚಿಗುರಲಿ
ಪಂಚಕರಣತರುಗಳೆಲ್ಲ
ಫಲಭಾರದಿ ಬಾಗಲಿ
ಸಕಲಫಲದ ನೈವೇದ್ಯಕೆ
ಮಮಕಾರವು ಅಡಗಲಿ
ಶಶಿವಿಕಾಸಮಂದಹಾಸ-
ಸೌಂದರ್ಯವು ಮೂಡಲಿ
ಜ್ಞಾನರವಿಯು ಬೆಳಗಲಿ
ಅಂಧಕಾರವಳಿಯಲಿ
ವಿಮಲಚಿತ್ತಜಲಧಾರೆಗೆ
ಜೀವಶಿವನು ನೆನೆಯಲಿ
ಡಿ.ನಂಜುಂಡ
06/05/2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ