ನಾನು ಹಾರುವ ಹಕ್ಕಿ ಬಾನೊಳಗೆ ತೂರುವೆನು
ನನ್ನದೆಂಬುವ ಭಾವ-ಗಳನೆಲ್ಲ ಕಳಚಿ
ನನ್ನೊಡಲ ಕುಡಿಯೊಂದು ಮೂಡುವಾ ಹೊತ್ತಿನಲಿ
ನಿನ್ನ ಮನೆಹಿತ್ತಲಿಗೆ ಬರುವೆ ಮೈಚಾಚಿ
ನೀನುಂಡ ಹಣ್ಣುಗಳ ಬೀಜಗಳನೂರಿಬಿಡು
ನಿನ್ನ ಕೈದೋಟದಲಿ ಬೆಳೆಸೊಂದು ಗಿಡವ
ನಾನಲ್ಲಿ ಗೂಡೊಂದ ಕಟ್ಟಿ ಮೊಟ್ಟೆಗಳಿಟ್ಟು
ತನುಮನದ ಕಾವ್ಕೊಟ್ಟು ಮೆರೆವೆ ತಾಯ್ತನವ
ಒಂದೆರಡು ಹಣ್ಣುಗಳ ಕೊಕ್ಕಿನಲಿ ನಾ ಕುಕ್ಕಿ
ತಂದು ಮರಿಗಳಿಗಿತ್ತು ಬೆಳೆಸುವೆನು ಬೇಗ
ಹಿಂದೆ ಮುಂದಕೆ ನೆಗೆದು ನಲಿಯುತಿರೆ ನನ್ನೊಲವು
ಬಂದ ದಾರಿಯ ಹಿಡಿದು ತೆರಳುವೆನು ಆಗ
ಹಿತ್ತಲಿನ ಹಣ್ಣುಗಳ ಹಕ್ಕಿಗಳು ತಿಂದುಗುಳಿ
ಬಿತ್ತುತಿರೆ ಬೀಜಗಳ ಹರಡುವುದು ಹಸಿರು
ಸುತ್ತಮುತ್ತಣ ಬನದ ಚೆಲುವು ಚಿಗುರತಲಿರಲು
ಮತ್ತೆ ಹರಿವುದು ಎನ್ನ ಬಸಿರಿನಲಿ ಉಸಿರು
ಗಿಡವನೊಂದನು ನೆಟ್ಟು ನೀರೆರೆದು ಪೋಷಿಸುತ
ಸಡಗರದ ಬದುಕನ್ನು ಬಾಳುತಿರೆ ನೀನು
ಕುಡಿಯೊಡೆದು ಫಲವಿಡಲು ಹರಡುವೆನು ಎಲ್ಲೆಲ್ಲೂ
ಕಾಡ ಸೊಬಗಿನ ನಡೆಗೆ ನಲಿಯುವೆನು ನಾನು
ಹಾರೋಣ ಬಾ ಗೆಳೆಯ! ಅರಿವಿನಾಗಸದಲ್ಲಿ
ತೂರೋಣ ಆಸೆಗಳ ಕನಸ ಕಳೆಯುತಲಿ
ಮರೆಯೋಣ ಭಾರಗಳ ಹರಡೋಣ ಹಗುರಗಳ
ಸೇರೋಣ ಜಗದಿರವ ನಲಿವನುತ್ತುತಲಿ
ಡಿ.ನಂಜುಂಡ
03/05/2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ