ಮಂಗಳವಾರ, ಜನವರಿ 27, 2015

ಕಾಫಿ

ಬಿಸಿಬಿಸಿ ಕಾಫಿಯ ಹಬೆಯನು ಸ್ಪರ್ಶಿಸೆ
ತಲೆಬಿಸಿಯಾ ಕಾವಳಿಯುವುದು
ಮೇಲಧಿಕಾರಿಯ ದರ್ಪದ ಬಿರುಮೊಗ
ಕ್ಷಣಮಾತ್ರದಿ ಮರೆಯಾಗುವುದು

ಒತ್ತಡಗಳು ಬದಿ ಸರಿಯುವುವು
ಬತ್ತಿದ ಕಂಗಳು ಅರಳುವುವು
ತಲೆಗೂದಲುಗಳು ಒಗ್ಗೂಡುವುವು
ಇಂದ್ರಿಯಗಳು ಸಭೆ ಸೇರುವುವು

ಸಿಹಿಗೂಡಿದ ಕಹಿ ಕಾಫಿಯ ಹೀರುತ
ಬುರುಬುರಿಗಳ ತಾ ಕಡಿಯುತಿರೆ
ಸರಸರ ಪದಗಳು ಸರತಿಯ ಸಾಲಲಿ
ನಾಲಗೆ ಮೇಲ್ ಕುಣಿಕುಣಿಯುತಿರೆ

ನಾಳೆಯ ಚಿಂತೆಗಳೆಲ್ಲವು ಕೂಡಲೆ
ನೇಣಿನ ಕುಣಿಕೆಗೆ ಬೀಳುವುವು
ಸುಮ್ಮನೆ ಮನಸನು ಸುಟ್ಟಾ ತಪ್ಪಿಗೆ
ಆತ್ಮಾರ್ಪಣೆಯಲಿ ಕೊನೆಯಾಗುವುವು

ಕಾರ್ಗತ್ತಲ ತೆರ ಕೆಳಗಿಳಿದಿಹ ಗಸಿ
ಲೋಟದ ಬುಡದಲಿ ಒಗ್ಗೂಡೆ
ಹರಿ ಕುಳಿತಿಹ ಹೃತ್ಪದ್ಮದ ದಳಗಳು
ಕಾಫಿಯ ಪರಿಮಳದೊಡಗೂಡೆ

ಇಂದಿನ ಕೆಲಸವ ಇಂದೇ ಮಾಡುವೆ
ಎಂಬಾ ಶಪಥವು ಚಿಮ್ಮುವುದು
ಹೆಂಡತಿ ಮಕ್ಕಳು ಮಿತ್ರರು ಮುದುಕರು
ಎಲ್ಲರ ಮೇಲ್ ದಯೆಮೂಡುವುದು

ದೂರದ ದೃಷ್ಟಿಯು ಹೊಳೆಯುವುದು
ಮಾರ್ಗವು ಗೋಚರವಾಗುವುದು
ತುಸು ಸುಲಭದ ಹೊಸ ಪಥದಲಿ ಚಲಿಸಲು
ನಿರ್ಮಲ ಮನಸಣಿಯಾಗುವುದು
ಶುಭಮಂಗಳಕರವಾಗುವುದು.

ಡಿ.ನಂಜುಂಡ
27/01/2015
3 ಕಾಮೆಂಟ್‌ಗಳು:

 1. ಆಹಾ! ಬಹಳ ಚೆನ್ನಾಗಿದೆ :)

  ಬಿಸಿ ಬಿಸಿ ಕಾಫಿಯ ಪದದಲಿ ಕುಡಿಸಿ
  ತಲೆ ಬಿಸಿ ನಂಜನು ತೆಗೆದಿಹಿರಿ
  ಪರಿ ಪರಿ ವಿಧದಲಿ ಸಂತಸ ಬಡಿಸಿ
  ಸಿರಿ ಕವಿ ಮುಕುಟವ ಧರಿಸಿಹಿರಿ

  ಪ್ರತ್ಯುತ್ತರಅಳಿಸಿ
 2. ತಮ್ಮ ಈ ಕವನದ ದೆಸೆಯಿಂದ ತಗೊಳ್ಳಿ ನಾನೂ ಕಾಫೀ ಹೀರಲು ಹೊರಟೆ, ಜೊತೆಗೊಂದು ಸಿಗರೇಟು!
  'ಹರಿ ಕುಳಿತಿಹ ಹೃತ್ಪದ್ಮದ ದಳಗಳು' ಕ್ಯಾ ಬಾತ್ ಹೈ!

  ಪ್ರತ್ಯುತ್ತರಅಳಿಸಿ
 3. ಧನ್ಯವಾದಗಳು ಬದರೀ ಮತ್ತು ಬದರೀಯವರೇ..

  ಪ್ರತ್ಯುತ್ತರಅಳಿಸಿ