ಯಾವುದೋ ಕಲ್ಪನೆಗೆ ಕವಿಮನವು ಸಂಚಲಿಸಿ
ಉಲ್ಲಾಸಭಾವದಲಿ ಉಯ್ಯಾಲೆಯಾಡಿ
ವ್ಯೋಮಾದಿ ಮಧ್ಯಾಂತರಾಹಿತ್ಯ ಪರಿಪೂರ್ಣ-
ಪದಬಂಧಸಾಹಿತ್ಯದಾನಂದವೂಡಿ
ಅದ್ವೈತ ವಾಗರ್ಥಬೀಜಗಳನುಪಚರಿಸಿ
ಚಿತ್ತಭೂಮಿಯನಗೆದು ಅಲ್ಲಲ್ಲಿ ಬಿತ್ತಿ
ಸತ್ಸಂಗ ಸಾವಯವ ಸಾರಗಳನೈತಂದು
ನೇತ್ರಾದಿ ಕರಣಗಳ ಸೊಲ್ಲುಗಳನೊತ್ತಿ
ಅಸ್ತಿ ನಾಸ್ತಿಗಳೆಂಬ ಕಳೆಗಳೆಲ್ಲವ ಕಿತ್ತು
ಸದಸದ್ವಿವೇಕವಿಜ್ಞಾನತಂತ್ರದಲಿ
ಆಂತರ್ಯದಾಕಾಶವಿಸ್ತಾರಚೈತನ್ಯ-
ಕಣಸ್ಪರ್ಶದಾ ಝಣದ ಕುಣಿದಾಟದಲ್ಲಿ
ಕಾಮನಾ ಬಿಲ್ಲಂತೆ ವರ್ಣವೆಲ್ಲವು ಬಾಗಿ
ಸೃಷ್ಟಿಸೌಂದರ್ಯಕ್ಕೆ ತಾಗಿ ಧ್ವನಿಯಾಗಿ
ರವಿಯ ಸಾರಥಿಯಾಗಿ ಅರುಣ ತಾ ಬರುವಾಗ
ಬಾನಾಡಿಗಳ ಕೊರಳ ಸ್ವರಮೇಳವಾಗಿ
ತಾನನವೇ ತಾನಾಗಿ ಬಂತು ಹಾಡಾಗಿ.
ಡಿ.ನಂಜುಂಡ
27/01/2015
ತಮ್ಮ ಧ್ವನಿಯಾದ ಕವನವೂ ನನಗೆ 'ಪದಬಂಧಸಾಹಿತ್ಯದಾನಂದವೂಡಿ' ಆನಂದ ಕೊಟ್ಟಿತು.
ಪ್ರತ್ಯುತ್ತರಅಳಿಸಿಲಾಲಿತ್ಯಪೂರ್ಣ ರಚನೆ. :-)