ಕಂದನಂದವು ಮೊಗದ ಚೆಂದವು
ತಂದೆಯಂತಿದೆ ಎಂದರೆ?
ಒಂದು ದಿನದಲಿ ಹೇಗೆ ಬಂದನು
ಎಂದರಾಗದೆ ತೊಂದರೆ?
ಹೂವನಿಡದೇ ಫಲವ ಬಿಡುವುದೆ?
ಯಾವ ಬಳ್ಳಿಯದೆಂದರೆ?
ಭಾವವಿರದೇ ಕವಿತೆಯಿರುವುದೆ?
ಯಾವುದೀ ಬಗೆಯೆಂದರೆ?
ಏನ ಮಾಡಲಿ ಎತ್ತ ಪೋಗಲಿ
ಕಾಣದಾಗಿದೆ ಕಂದನೆ!
ಕ್ಷಣದಿ ವರವನು ಒರೆಗೆ ಹಚ್ಚಲು
ಮಾನವನ್ನೇ ತೆತ್ತೆನೆ?
ನನ್ನ ತಾಯ್ತನಕೇಕೆ ನಿಂದೆಯು
ಇನನ ಹೆತ್ತವರಾರದು?
ಮೌನದುದರದಿ ಮಾತು ಮೊಳೆಯದೇ?
ತಾನದಮ್ಮನದಾರದು?
ಹರಿಯ ಚರಣದ ಸತತಧಾರೆಯೆ
ಹರನ ಜಟೆಯೊಳ ಬಂಧಿಯೆ!
ಹರಿಯಬಿಡುವೆನು ನಿನ್ನ ಹರಿವಲಿ
ಹರಸಲಾರೆಯ ಗಂಗೆಯೆ!
ಕರುಳ ಕುಡಿಯನು ಮಡಿಲಿಗಿಡುವೆನು
ಪೊರೆಯಲಾರೆಯ ಪಾಪವ?
ಕರ್ಮಭಾರವ ಮೇಲೆ ತೇಲಿಸಿ
ತಣಿಸಲಾರೆಯ ತಾಪವ?
ಡಿ.ನಂಜುಂಡ
25/01/2015
ವಿಧಿಗೇ ಕುಂತಿಯು ಪ್ರಶ್ನಿಸುವಂತೆ ಪ್ರಶ್ನಾರ್ಥಕವಾಗೇ ಮೂಡಿಬಂದಿದೆ ಕವನ. ಪ್ರಲಾಪವೂ ಮನೋ ವೇದಕವಾಗಿದೆ.
ಪ್ರತ್ಯುತ್ತರಅಳಿಸಿಕವನ ಕಟ್ಟಿದ ರೀತಿ ಇಷ್ಟವಾಯಿತು
ಪ್ರತ್ಯುತ್ತರಅಳಿಸಿನಿಮ್ಮೀ ಮಾತುಗಳಿಗೆ ಕೃತಜ್ಞತೆಗಳು ಬದರೀನಾಥ್ ಮತ್ತು ಸ್ವರ್ಣರವರೇ...
ಪ್ರತ್ಯುತ್ತರಅಳಿಸಿ