ಭಾನುವಾರ, ಮಾರ್ಚ್ 9, 2014

ಬಾರೋ ಮದನನೆ!

ಹೃದಯೋದ್ಯಾನದಿ ಪದವಿಡು ಬಾರೋ
ಮದನನೆ! ಸುಮಮಧುವರ್ಧನನೆ!
ವದನವನರಳಿಸಿ ಮೋದವ ತಾರೋ
ಮಾಧವಸಮ ಸಂಮೋಹನನೆ!

ಭವ್ಯವಸಂತದ ಮನಸಂಕಾಶಕೆ
ಭಾವಾವರಣವನಣಿಗೊಳಿಸಿ
ಕವಿತಾಪದಸಂಚಾರಣಪಥವನು
ನವಸುಮಶರದಲಿ ಶೃಂಗರಿಸಿ

ಛಂದೋವೃಂದದಿ ಬಂಧಿತ 'ಜೀವ'
ಮಂದಿರಮೌನದೊಳನುರಣಿಸಿ
ಸುಂದರ ವೈಖರಿವಲ್ಲರಿಯಂದಕೆ
ಚಂದ್ರವಿಕಾಸದ ಗತಿಯಿರಿಸಿ

ಸಂತತಧಾರಾಚಿತ್ತದಿ ಬಾರೋ
ಚಿಂತಿತ ಮನಸಿನ ರಥವೇರಿ
ಆಂತರ್ಯದಿ ನೀ ಚೈತ್ರವ ತಾರೋ
ಅಂತರತಮಮೃದುಪದವೇರಿ

ಡಿ.ನಂಜುಂಡ

09/03/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ