ಭಾನುವಾರ, ಮಾರ್ಚ್ 30, 2014

ಗತಿಯ ತೋರೊ ಮಾಧವ!

ಮಾತಿಗೊಂದು ಮಿತಿಯನಿರಿಸಿ
ಗತಿಯ ತೋರೊ ಮಾಧವ!
ಪ್ರೀತಿಯುಸಿರನೆದೆಯಲಿರಿಸಿ
ಮತಿಗೆ ಬಾರೊ ಕೇಶವ!
 
ಜಗದ ತುಂಬ ಪಾದ ಬೆಳೆಸಿ
ಸೊಗವನಿತ್ತ ದೇವನೆ!
ನಗುವಿನೊಳಗೆ ಮೆಲ್ಲ ಬಿರಿದು
ಮೊಗದ ಮಾತ ಕಾಯ್ವನೆ!
 
ಎಲ್ಲ ದಿಕ್ಕಿನೆಡೆಗೆ ಹರಹಿ
ಸೊಲ್ಲಿನರಿವ ಹಿಗ್ಗಿಸಿ
ಕಲ್ಲು, ಮಣ್ಣು, ಗಾಳಿಯಲ್ಲು
ನಿಲ್ಲುವಂತೆ ಬಾಗಿಸಿ
 
ಮೇಲಕೇರಿ ಹಾರದಂತೆ
ತಳದ ಅರಿವನುಬ್ಬಿಸಿ
ಕೆಳಕೆ ಬಾಗಿ ಬೀಳದಂತೆ
ಮೇಲಕೆನ್ನನೆಬ್ಬಿಸಿ
 
ನಿನ್ನ ಚರಣಕಮಲದಲ್ಲಿ
ಮನದ ಹರಿವ ನಿಲ್ಲಿಸಿ
ನನ್ನದೆಂಬುದೆಲ್ಲ ಮರೆಸಿ
ಜ್ಞಾನದೀಪ ಬೆಳಗಿಸಿ
 
ಡಿ.ನಂಜುಂಡ
30/03/2014
 
 

2 ಕಾಮೆಂಟ್‌ಗಳು: