ಬುಧವಾರ, ಏಪ್ರಿಲ್ 2, 2014

ಚಂದಮಾಮ!

ನೀಲಬಾನಿನ ಬೆಳ್ಳಿಜೋಲಿ-
ಯೊಳೆದ್ದು ಕುಣಿಯುವ ಕಂದನೆ!
ನಿನ್ನ ಅಮ್ಮನದೆಲ್ಲಿ ಹೋದಳು?
ಬೀಳಬೇಡವೊ ಚಂದ್ರನೆ!


ಚೆಲುವ ಗಲ್ಲದಿ ಹಾಲ ಚೆಲ್ಲುತ
ಜಿಗಿಯುತಿರುವುದು ಏತಕೆ?
ಬಾಲರಿಲ್ಲವೆ ನೀಲಿಯಂಗಳ-
ದಲ್ಲಿ ಆಡಲು ಆಟಕೆ?

ಉಬ್ಬಿದಂತಿಹ ನಿನ್ನ ಮೋರೆಯು
ತೆಳ್ಳಗಾಯಿತದೇತಕೆ?
ಕರಿಯ ತಬ್ಬಿಹ ಇರುಳಲೊಬ್ಬನೆ
ಕಾಣೆಯಾಗುವುದೇತಕೆ?


ಅಮ್ಮರೆಲ್ಲರು ನಿನ್ನ ತೋರಿಸಿ
ಚಂದಮಾಮಾ ಎನ್ನಲು 
ಕಂದರೆಲ್ಲರ ಮೊಗಕೆ ಬಂದೆಯಾ?
ತುತ್ತು ಅನ್ನವನುಣ್ಣಲು 


ಕೆನ್ನೆ ಹಿಂಡುತ ಮುತ್ತನಿಕ್ಕಲು
ಉಬ್ಬಿ ಹೋದೆಯಾ ಕ್ಷಣದಲಿ ?
ಹಾರಿ ಮೇಲಕೆ ತಿಂಗಳಿರುಳಲಿ
ಮತ್ತೆ ಬಂದೆಯಾ ಬಾನಲಿ?


ಡಿ.ನಂಜುಂಡ
02/03/2014  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ