ಭಾನುವಾರ, ಏಪ್ರಿಲ್ 27, 2014

ನುಡಿಯೊಡತಿ! ಬಾ

ನುಡಿಯೊಡತಿ! ನೀಡೆನಗೆ
ಆಡುಮಾತಿನ ಬೆಡಗ
ನಡೆಸೆನ್ನ ಕೊಠಡಿಯಿಂದಾಚೆಗೂ ಬೇಗ
ಗುಡಿಯಿಂದ ಹೊರಬಂದು
ಓಡಾಡಿ ಬೀದಿಯಲಿ
ನುಡಿಸೆನ್ನ ಜಿಹ್ವೆಯಲಿ ಹೊಸತೊಂದು ರಾಗ

ಅಡಿಗಡಿಗೆ ದಯಮಾಡು
ನುಡಿಗಟ್ಟನಿಡುವಾಗ
ಎಡವದೇ ನಡೆವಂತೆ ತೋರೆನಗೆ ಜಾಗ
ಪಡೆನುಡಿಗೆ ಗಡಿಬಿಡಿಯ
ಸಡಗರದ ಸೊಬಗಿರಿಸಿ
ಬೆಡಗಿನೊಡವೆಯ ತೊಡಿಸಿ ನೋಡುವೆನು ಆಗ
  
ಬಡವನೊಡಲಿನ ಕಿಡಿಗೆ
ಗುಡಿಯ ಕತ್ತಲೆಯಳಿದು
ದಡಬಡನೆ ಓಡುತಿರೆ ಬಾ ಮಾತಿನೊಡತಿ!
ತಡಿಕೆಗೋಡೆಯೊಳಿಣುಕಿ
ಸೊಡರಿನೊಳು ಪ್ರಜ್ವಲಿಸಿ
ಬಾಡುತಿಹ ಮೊಗವೇರಿ ಬಾರೆ ಕನ್ನಡತಿ!

ಬೇಡದಾ ನುಡಿಗಳನು
ಕಾಡಿನೊಳಗಟ್ಟಿಬಿಡು
ಹಾಡಾಗಿ ಹದಗೊಂಡು ಹಿಂತಿರುಗಲೆದೆಗೆ 
ನಾಡ ಕನ್ನಡಿಗರಾ
ಜಡತನವ ಕಳೆವಂತೆ
ಆಡಿ ಕುಣಿಯುತಲಿರಲಿ ಡಮರುಗುದ ದನಿಗೆ

ಡಿ.ನಂಜುಂಡ
27/04/2014ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ