ಶನಿವಾರ, ಏಪ್ರಿಲ್ 26, 2014

ಮನವೆ! ನೀ ಭ್ರಮಿಸದಿರು

ತನ್ನ ಕಾಲಿನ ಮೇಲೆ ನಿಲ್ಲಲಾರದ ಕಾಲ
ಓಡೋಡಿ ಮರೆಯಾಗಿ ಹೋಗುವುದು ಸುಳ್ಳು
ಮನವೆ! ನೀ ಬೆಂಬತ್ತಿ ಹೆಜ್ಜೆ ಗುರುತನು ಹುಡುಕೆ
ಇಲ್ಲದಿರುವುದು ಹೇಗೆ ಸಿಕ್ಕೀತು ಹೇಳು

ಭೂತಕ್ಕೆ ನೆಲೆಯಿಲ್ಲ ಭವ್ಯವೆಲ್ಲವು ಊಹೆ
ಇರುವುದೀ ಕ್ಷಣವೊಂದೆ-ಅನುಭವಿಸು ಮೊಗೆದು
ನಿನ್ನೆಯಾ ನೆನಪಿನಲಿ ನಾಳೆಯಾ ಚಿಂತೆಯಲಿ
ಮರೆಯದಿರು ಹೊತ್ತ ಇನ್ನೆಂದು ಸಿಗದು

ಬುವಿಯ ಗುರುತರ ಕಾಂತವೆಲ್ಲವನು ಸೆಳೆದಂತೆ
ನಿನ್ನೂಹೆಗಳ ಸೆಳೆದು ಎಳೆದಾಡುತಿಹುದು
ಒಳಗಿನಿಂದಲಿ ಜಿಗಿದು ಹಾರುವಾ ಯತ್ನದಲಿ
ಇಲ್ಲದ್ದು ಇದ್ದಂತೆ ನಿನಗನಿಸುತಿಹುದು

ನಿನ್ನೆ-ನಾಳೆಗಳೆಲ್ಲ ಇರುವುದೀ ಕ್ಷಣದಲ್ಲಿ
ಬಿಟ್ಟರದು ಸಿಗದೆಂದೂ ಜನುಮದಲ್ಲಿ
ಬಂದ ಊಹೆಯು ನಿಂತು ಕೆಳಜಾರುವಾ ಮುನ್ನ
"ಇಂದು" ಇರುವುದು ನೋಡು ಬಿಂದುವಲ್ಲಿ

ಕ್ಷಣದ ಹೊತ್ತೊಂದು ಬಿಂದುಮಾತ್ರದಿ ಕಂಡು
ಅಲ್ಲಿ ವಿಸ್ತರಿಸೆ ಅದು ನಿರಪೇಕ್ಷದಂತೆ
ಆದ್ಯಂತರಹಿತದಲಿ ಏಕರಸವಾಗಿರದೆ
ನೀ ತಿಳಿದುದೆಲ್ಲವೂ ಸಾಪೇಕ್ಷದಂತೆ

ಮನವೆ! ನೀ ಭ್ರಮಿಸದಿರು, ನಿನ್ನೊಳಗೆ ನೆಲೆಯಾಗು
ಅನವರತವನುಭವಿಸು ಶಾಂತತೆಯ ಸೊಬಗ
ಈ ಕ್ಷಣದ ಅರಿವೊಂದು ಹರಿವಾಗಿ ವಿಸ್ತರಿಸಿ
ಜಗದಗಲ ಹರಡುತಿರೆ- ನೋಡಲ್ಲಿ ಬೆರಗ

ಡಿ.ನಂಜುಂಡ
27/04/2014



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ