ಶನಿವಾರ, ಏಪ್ರಿಲ್ 12, 2014

ಬಾನಿನಲಿ ಬಾಗಿಹನು ಹುಣ್ಣಿಮೆಯ ಚಂದ್ರ!

ಬಾನಿನಲಿ ಬಾಗಿಹನು ಹುಣ್ಣಿಮೆಯ ಚಂದ್ರ
ಬನದೊಳಗೆ ತೂರುತಲಿ ಬೆಳಕ ಲಾಂದ್ರ

ಕೆಂದಳಿರ ಚಪ್ಪರದ
ಸಂಧಿಯಲಿ ಇಣುಕಿಣುಕಿ
ಬಿಂದುಗಳನಿರಿಸುತಲಿ ಬರೆದಿಹನು ಚಿತ್ರ
ನಂದನದ ಸೊಬಗೆಲ್ಲ ಕನಸಿನಲಿ ಮಾತ್ರ

ಶೃಂಗಗಿರಿಯಲಿ ನಿಂತು
ತಿಂಗಳಿರುಳನು ನೋಡೆ
ಬಂಗಾರವಾಗಿಹವು ತರಗೆಲೆಗಳೆಲ್ಲ
ಕಂಗಳೊಳ ಬಿಂಬದಲಿ ಒಡವೆಯಂತೆಲ್ಲ

ಬಂದಿಹನು ಮನದೊಳಗೆ
ತಂದಿಹನು ಶುಭಘಳಿಗೆ
ನಿಂದು ಹೃದಯಾಗಸದ ಮಂದಿರವನೇರಿ
ಅಂದದಿಂದಲಿ ಮನದÀ ಕಾನನದಿ ತೂರಿ

ಕಾಂತಿವೃಷ್ಟಿಯ ಸುರಿಸಿ
ಶಾಂತವೀಯುತ ಭವಕೆ
ಸಾಂತದೊಳು ಏಕಾಂತಸುಖಸುಧೆಯ ಹರಿಸಿ
ಅಂತರತಮಗುಹೆಯೊಳನಂತಮುಖವಿರಿಸಿ

ಡಿ.ನಂಜುಂಡ
12/04/2014















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ