ಶನಿವಾರ, ಏಪ್ರಿಲ್ 19, 2014

ತಾಳ್ಮೆಯೊಡಲು

ನೊಂದು ಸುರಿಸಿದ ಹೆಣ್ಣ ಕಣ್ಣೀರ ಧಾರೆಯದು
ಇಳೆಯಲ್ಲಿ ತಾ ಇಂಗಿ ಹರಿವಾಗಿದೆ
ತಾಳ್ಮೆಯಲಿ ಭೂಮಾತೆಯೊಡಲಿನಲಿ ಸೋಸಿರಲು
ಕೊಳಗಳಲಿ ಸಿಹಿನೀರ ಸೆಲೆಯುಕ್ಕಿದೆ

ಸ್ತ್ರೀಕುಲದ ಕಣ್ಣೀರ ಧಾರೆಯದು ನೆಲಕಿಳಿದು
ಜಾನಕಿಯ ರೂಪದಲಿ ಬುವಿಯಿಂದ ಭವಿಸೆ
ರಾಣಿಯಾಗಿಯೂ ತಾನು ಮುಳ್ಳು ಹಾದಿಯ ಸವೆಸಿ
ಅಪಹರಣಕೊಳಗಾಗಿ ಕಂಬನಿಯ ಸುರಿಸೆ

ಅವರಿವರ ಮಾತುಗಳ ಅರಸ ತಾ ಕೇಳುತಲಿ
ತನ್ನರಸಿಯನು ಮತ್ತೆ ವನವಾಸಗೊಳಿಸೆ
ಅನುಮಾನದಲಿ ಪತಿಯೇ ಅವಮಾನಗೊಳಿಸುತಿರೆ
ಅವನಿಮಾತೆಯು ತಾನೇ ಮಗಳ ಸ್ವೀಕರಿಸೆ

ಮನಸಿನಿಂದಲೆ ಸತಿಯ ದೂರಗೊಳಿಸುತಲಿರಲು
ಅಡಿಗಡಿಗೆ ಬೇಯುತಲಿ ಅಳುಸುರಿಸುತಿರಲು
ಕಂಬನಿಯ ಕೋಡಿಗಳು ಮಣ್ಣನ್ನು ತೋಯಿಸುತ
ಬುವಿಯಾಳಕಿಳಿದುಕ್ಕಿ ಕಡಲಿನೊಳು ಬರಲು.

ಡಿ.ನಂಜುಂಡ
19/04/2014


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ