ಸೋಮವಾರ, ಏಪ್ರಿಲ್ 28, 2014

ಸೊಲ್ಲುಸೊಲ್ಲಿನ ತಿಳಿವು ಜೊಳ್ಳಿನಂತೆಲ್ಲ!

ದೇವನಿರುವುದು ಸುಳ್ಳು, ಇಲ್ಲವೆಂದರೂ ಸುಳ್ಳು
ಭವದಿ ಭ್ರಮಿಸುವ ಮನದ ಏರಿಳಿತವೆಲ್ಲ
ಭಾವತೀವ್ರತೆಯಲ್ಲಿ ಅನುಭಾವವಡಗಿಲ್ಲ
ಅವಸಾನದಂಚಿನಾ ಅಲೆಗಳಂತೆಲ್ಲ

ಅಲೆಗಳೆರಡರ ಮೂಲ ಜಲಧಿಯಾಳದೊಳಿರಲು
ತಳಕಿಳಿಯದೇ ತಿಳಿದ ತಿಳಿವು ತಿಳಿವಲ್ಲ
ಅಳತೆಗೋಲಲಿ ಅಳೆದು ಆಳವನು ಹೇಳುತಿಹ
ಸೊಲ್ಲುಸೊಲ್ಲಿನ ತಿಳಿವು ಜೊಳ್ಳಿನಂತೆಲ್ಲ

ತಳದೊಳಿಳಿಯದ ಅರಿವೇ ಅಲೆಯ ರೂಪದ ಮನವು
ಸುಳ್ಳಿನಲ್ಲೊಡೆಯುತಿಹ ಗುಳ್ಳೆಯಂತೆಲ್ಲ
ಮೂಲಮನೆಯಲಿ ಕುಳಿತು ಮನದ ಉಬ್ಬರವಿಳಿಸಿ
ಎಲ್ಲವರಿತಿಹ ಮೌನಕೇರಿಳಿತವಿಲ್ಲ 

ಧೂಳುಧೂಳಲಿ ನಲಿವ ಒಲವಿನೊಳು ಒಂದಾಗಿ
ತಿಳಿವಿನಾಳವ ತುಳಿಯೆ ಇದ್ದರೂ ಇಲ್ಲ.
ಇಲ್ಲಗಳ ಇರುವಿಕೆಯ ಇಲ್ಲವಾಗಿಸಿ ಮನವು
ತೇಲುತಲಿ ತೆಳುವಾಗೆ ಇದ್ದಂತೆ ಎಲ್ಲ.

ಡಿ.ನಂಜುಂಡ
28/04/2014




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ