ಬಾನೇರಿ ಬೆಂಗದಿರ ತಾ ಬಂದು ಹಗಲಿನಲಿ
ತನುವಲ್ಲಿ ಬೆವರಿಳಿಸಿ ತಂಪುಗೊಳಿಸೆ
ತಣ್ಣನೆಯ ತಂಗದಿರ ತಾ ಬಂದ ಇರುಳಿನಲಿ
ಮನದಿ ಮದನನ ಕೆಂಪ ಕಾವನಿರಿಸಿ
ಇಳೆಯ ಮಣ್ಣನು ಸುಟ್ಟು ಹದಗೊಳಿಸಿ ಕಾಳಿಟ್ಟು
ಕಾಲಕಾಲಕೆ ಮಳೆಯ ನೀರ ನೀಡಿ
ಮೊಳಕೆಯೊಡೆಯುತ ಕುಡಿಯು ಚಿಗುರಿ ಚಿಮ್ಮುತಲಿರಲು
ನಳನಳಿಪ ತೆನೆಗಳಲಿ ರವಿಯ ನೋಡಿ
ಕುಸುಮಶರನೊಡನಾಟ ನಿಶೆಯ ಬೆಳಕಿನ ನೋಟ
ಪಿಸುಮಾತಿನಾಸೆಗಳ ಹಸನುಮಾಡೆ
ಬಸಿರಿನಲಿ ಜೀವಕಣವಂಕುರಿಸಿ ಸಂಚರಿಸಿ
ಹೊಸಗೂಸುವಳುವಾಗ ಶಶಿಯ ನೋಡಿ
ಬಿಸಿಲ ಬೆವರಿನ ಗಂಧವರಳಿಸುತ ಕುಡಿಗಳನು
ಹೊಸ ಕಾಳಿನೊಳ ಹೊಕ್ಕು ಮೊಗಕೆ ಬರಲಿ
ಹಸುಗೂಸಿನುಸಿರಿನಲಿ ಸೂಸುತಿಹ ಗಂಧವದು
ಬಿಸಜದಲದಲಿ ಹೊಮ್ಮಿ ಎದೆಗೆ ಬರಲಿ.
ಡಿ.ನಂಜುಂಡ
16/04/2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ