ಗುರುವಾರ, ಏಪ್ರಿಲ್ 17, 2014

ಹರಿ! ನಿನ್ನ ಚರಣದೊಳು

ಹರಿ! ನಿನ್ನ ಚರಣದೊಳು ಮನದ ಹರಿವಿರುವಂತೆ
ವರವಿತ್ತು ಹರಸೆನ್ನ ಹೃದಯದೇವ!
ಕರಣಗಳ ಹುರಿಗೊಳಿಸಿ ಭಾವಶರವನು ಸಿಗಿಸಿ 
ಗುರಿಯ ಕರುಣಿಸು ಎನಗೆ ಪರಮದೇವ!

ಏಳು ಬೀಳುಗಳೆಲ್ಲ ಸಹಜಸೃಷ್ಟಿಯ ಹಾಗೆ
ಬಾಳಿಗಂದವನಿತ್ತು ನಗುವಿನಲಿ ಬರಲಿ
ಸಾಲು ಸಾಲಲಿ ನಿಂದ ನಿನ್ನೆಯನುನುಭವವೆಲ್ಲ
ಕಾಲಕಾಲಕೆ ಬಲಿತು ಫಲವಾಗುತಿರಲಿ

ಸಫಲವಿಫಲಗಳೆಲ್ಲ ಮೂಜಗದಿ ಪಸರಿಸಿಹ
ಅಪರಿಮಿತಪದತಲಕೆ ಹವಿಯಾಗಿ ಸಲಲಿ
ಚಪಲತೆಯ ಚಿತ್ತವನು ಹದಗೊಳಿಸಿ ಪದವೊಂದು
ಜಪದ ಕುಡಿಗಳಲೊಡೆದು ತೆನೆಯಾಗಿ ಬರಲಿ

ನಿನ್ನಡಿಯ ಹುಡಿಯೆಲ್ಲ ಜಗದಗಲ ಹರಡಿರಲು
ನನ್ನ ಮನವದರಲ್ಲಿ ಒಂದಾಗಿ ನಿಲಲಿ
ಸೊನ್ನೆಯೊಳು ಸೊನ್ನೆ ತಾ ಕಳೆದುಳಿದ ಸೊನ್ನೆಯಲಿ
'ನಾನು' ಎಂಬರಿವೆಲ್ಲ ಸೊನ್ನೆಯಂತಿರಲಿ.

ಡಿ.ನಂಜುಂಡ

18/04/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ