ಶುಕ್ರವಾರ, ಏಪ್ರಿಲ್ 11, 2014

ನನ್ನ ಕವನ!

ಕುಸುಮಿಸದೆ ಪ್ರಸವಿಸಿದ ಕುಂತಿಯಾ ಕೂಸಂತೆ
ಗಂಗೆಯಲಿ ತೇಲುತಿರೆ- ನನ್ನ ಕವನ
ಬಸಿರ ಶಾಂತಿಯ ಯೋಗನಿದ್ರೆಯರಿವಿಲ್ಲದೆಯೆ
ಹಸನಾಗಿ ಬಾಳುವುದೆ? ನನ್ನ ಕವನ

ಮೋಹಿನಿಯ ಮೋಹಿಸಲು ಶಿವಧಾತು ಕೆಳ ಸುರಿಯೆ
ಇಳೆ ಧರಿಸಿ ತಾ ಪಡೆದ ಕುವರ ಕವನ
ಸೃಷ್ಟಿಯಂದಕೆ ಮಣಿದ ಹೃದಯಭಾವವು ಸ್ರವಿಸೆ
ವರ್ಣಗರ್ಭದಿ ಮೊಳೆತು ಬೆಳೆದ ಕವನ

ಧ್ಯಾನನಿರತ ಋಷಿ ತಾ ಕಾಮಚೇಷ್ಟಿತನಾಗಿ
ಮೇನಕೆಯ ಸಂಗಮಿಸಿ ಪಡೆದ ಕವನ
ಕಾಡಿನಾಶ್ರಮದಿ ಕಾಪಿಟ್ಟ ಶಕುಂತಲೆಯಾ
ಯೌವನದ ಸೆಳೆತವೇ? ನನ್ನ ಕವನ

ಬೆವರಿನಲಿ ಜನಿಸಿರುವ ಗಿರಿಜಾಪುತ್ರನಂತೆ
ಕಲ್ಪನೆಯ ಚಿತ್ರಣವೇ? ನನ್ನ ಕವನ
ಮಣ್ಣ ಬಿಂಬವನರ್ಚಿಸಿ ನೀರೊಳಗೆಸೆವಂತೆ
ಭಾವನಿರ್ಮೋಚನವೇ? ನನ್ನ ಕವನ
ಡಿ.ನಂಜುಂಡ
12/04/2014


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ