ಭಾನುವಾರ, ಏಪ್ರಿಲ್ 13, 2014

ಚೆಲ್ಲದಿರಲಿ ನಿನ್ನ ಚೆಲುವು!

ಚೆಲ್ಲದಿರಲಿ ನಿನ್ನ ಚೆಲುವು
ನಿಲ್ಲೆಲೆನ್ನ ಎದೆಯಲಿ
ಒಲವ ಜಲಧಿತಲವ ತಲುಪಿ
ಮೇಲಕೇರಿ ತೇಲಲಿ

ಮನವು ಹೊನಲಿನಂತೆ ಹರಿದು
ನಿನ್ನ ಒಡಲ ಸೇರಲಿ
ತನ್ನತನವ ಕಳೆಯಲುಳಿದ
ಸೊನ್ನೆ ತುಟಿಯಲರಳಲಿ

ನಲ್ಲೆ! ನಿನ್ನ ಮೊಗದ ನಗುವು
ಸೊಲ್ಲಿನೊಳಗೆ ತುಂಬಲಿ
ಮೊಲ್ಲೆ ಹೂವಿನಂತೆ ಬಿರಿದು
ಎಲ್ಲೆ ಮೀರಿ ಘಮಿಸಲಿ

ನೆಲದ ಮಣ್ಣನೆಳೆಯುತೆದೆಯ
ತಳದಿ ಹಸಿರನೊಡೆಯಲಿ
ಚೆಲುವನೆಲ್ಲ ಚೆಲ್ಲುತಿರಲಿ
ಬಾಳಿನಗಲ ಹರಡಲಿ

ಡಿ.ನಂಜುಂಡ
14/04/2014


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ