ಬ್ರಿಟಿಷರು ಭಾರತವಾಳುವ ಕಾಲದಿ
ನಡೆದಾ ಘಟನೆಯ ಹೇಳುವೆನು
ಮೇಲಧಿಕಾರಿಯ ತಿಥಿಯನು ಮಾಡಿದ
ಲಿಪಿಕನ ಕಥೆಯಾ ಬರೆಯುವೆನು
ಮಂಗಳವಾರದ ತಂದೆಯ ಶ್ರಾದ್ಧಕೆ
ರಜೆಯನು ಬೇಡಿದ ಮೈಲಾರಿ
ತಿಥಿಯನು ಮಾಡಲು ರವಿವಾರವಿದೆ
ರಜೆ ಕೊಡೆನೆಂದನು ಅಧಿಕಾರಿ
ಅಂತೂ ಇಂತೂ ಪುಸಲಾಯಿಸಲು
ರಜೆಯನು ಕೊಟ್ಟನು ಅಧಿಕಾರಿ
ತಿಥಿಯನು ಮಾಡಿದ ಸಾಕ್ಷಿಯ ಕೇಳಲು
ವಡೆಗಳನಿತ್ತನು ಮೈಲಾರಿ
ನಾಳೆಯೂ ಪುನಃ ವಡೆಗಳ ತಾರೋ
ಎಂದನು ಜಿಹ್ವಾಚಪಲಿಗನು
ತಿಥಿಯಿಲ್ಲದೆಯೇ ವಡೆಯನು ಮಾಡೆವು
ಆಗದು ಎಂದನು ಕರಣಿಕನು
ನನ್ನಯ ಶ್ರಾದ್ಧವ ನಾಳೆಯೆ ಮಾಡು
ವಡೆ ತರುವುದನು ಮರೆಯದಿರು
ನನ್ನಯ ನಾಲಿಗೆ ಚಪಲವ ತೀರಿಸೆ
ಬಡ್ತಿಯ ಕೊಡುವೆನು ನೋಡುತಿರು
ಮಾರನೆಯ ದಿನವೆ ಶ್ರಾದ್ಧವ ಮಾಡಿ
ವಡೆಗಳ ರುಚಿಯನು ಸವಿದಾಯ್ತು!
ಬಡ್ತಿಯ ಆಸೆಗೆ ಬದುಕಿರುವಾಗಲೆ
ಅಧಿಕಾರಿಯ ತಿಥಿಯು ಆಗೋಯ್ತು!
ಡಿ.ನಂಜುಂಡ
13/04/2014
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ