ಶುಕ್ರವಾರ, ಮಾರ್ಚ್ 28, 2014

ಹೂವಿದೆನ್ನಯ ನಲ್ಲೆಗೆ!

ನವವಸಂತದಲರಳಿ ನಿಂತಿಹು-
ದಾವುದೀ ನಗೆ ಮಲ್ಲಿಗೆ?
ಆವ ತಾರೆಯ ಛವಿಯ ತಂದಿದೆ?
ಭಾವಲತೆಗಳ ಗೆಲ್ಲಿಗೆ

ಮತ್ತಕೋಕಿಲರವದ ಕಲವದು
ಸುತ್ತಲೂ ಹರಿವಾಗಿರೆ;
ಬತ್ತದಿರುವಾ ಒಲವಿನೊರತೆಯು
ಸತತವೂ ಎದೆಯಲ್ಲಿರೆ;

ಮತ್ತೆ ಬಂದಿಹ ಯುಗಾದಿಗೆ
ಚಿತ್ತವಾರÀಮೆಯಾಗಿರೆ;
ನಿತ್ಯಸಂತಸವೀವ ಚೆಲುವಿನ
ನತ್ತಿನೈಸಿರಿಯಂತಿರೆ;

ಬೇವು ಬೆಲ್ಲವನರೆದ ಬದುಕಿನ
ಸವಿಯಲರಳಿಹ ಮಲ್ಲಿಗೆ!
ಕವಿಯ ಚೇತನಬಿಂಬದಂತಿಹ
ಹೂವಿದೆನ್ನಯ ನಲ್ಲೆಗೆ.

ಡಿ.ನಂಜುಂಡ

28/03/2014

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ