ಬೀಗವೊಂದೇತಕ್ಕೆ ಬಾಗಿಲಿಲ್ಲದ ಗುಡಿಗೆ?
ಬಾಗಿಲೇತಕ್ಕೆ ಚಾವಣಿಯೆ ಇಲ್ಲದಿರೆ?
ಚಾವಣಿಯ ಹೊಚ್ಚಲಿಕೆ ಗೋಡೆಗಳೆ ಇಲ್ಲದಿರೆ
ಅಭಿಷೇಕಗೈಯಲಿಕೆ ಮೂರ್ತಿಯಿಲ್ಲದಿರೆ
ಇರುವವನು ತಾನಿಲ್ಲದಂತಿರಲು ಅಲ್ಲಿಹನು
ಇಲ್ಲಿಹನು ಎಂದು ಸಂಕುಚಿಸುತ್ತಲಿಹನ
ಒಳಗರಿವು ಹೊರಬಾರದೊಲು ನಾನು ನಾನೆಂಬ
ಕುಣಿಕೆಯೊಳು ಬಂಧಿಸುತ ವಂದಿಸುತಲವನ
ನೀ ತಂದೆ ಜಗಕೆಲ್ಲವೆಂದು ಹೊಗಳುತ ನಿಂದು
ಜಗದಿಂದ ತಾ ಬೇರೆಯಾದೆಂತೆ ಬಗೆವ
ಅರಿವೊಂದು ಬೀಗುತಲಿ ಬೀಗವನು ಜಡಿಯಲಿಕೆ
ಬಾಗಿಲೆಲ್ಲಿದೆ ಗುಡಿಗೆ; ಹೇಳು ಗುರುದೇವ?
ಡಿ.ನಂಜುಂಡ
17/01/2018
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ