ಕವಿತೆಯೋ ವನಿತೆಯೋ ಲತೆಯೋ ಶಿವಲಲಿತೆಯೋ?
ತಳುಕು ಬಳುಕಿನ ಬೆಳಗ ಬೆಡಗಿನುಡುಗೆಯೋ?
ಹಸಿರು ತುಂಬಿದ ವನಕೆ ಹೊಂಬಣ್ಣವೂಡಿರಲು
ಬಾಗುತಿಹ ಮುಂಬೆಳಕಿನಲ್ಲಿ ನಾಚಿದೆಯೋ?
ಕರಿಮೋಡಗಳು ಗಿರಿಗಳೆಡೆಗೆ ನೋಡುತಿರೆ
ಹೊನಲುಗಳು ತಗ್ಗಿದೆಡೆಗೋಡಿ ಹರಿಯುತಿರೆ
ಬಾಳೆಗೊನೆಗಳು ಬಾಗಿ ನೆಲಕೆ ತಾಕುತಿರೆ
ದಿವ್ಯಸಂತಾನಗಳು ಇಳೆಗೆ ಇಳಿಯುತಿರೆ
ವಿಶ್ವವನಿತೆಯ ಭವ್ಯಸೌಂದರ್ಯವಲ್ಲಿಹುದು
ವಿಶ್ವಲಯಬದ್ಧತೆಯ ಕಾವ್ಯವಾಗಿಹುದು
ವಿಶ್ವಲತೆಯೇ ಬಾಗಿ ವಿಶ್ವವೃಕ್ಷವನೇರೆ
ವಿಶ್ವಲಾಲಿತ್ಯಪದಸುಮಗಳಲ್ಲಿಹುದು
ಸೃಷ್ಟಿಯೊಲವಿನ ಕಿರಣ ದೃಷ್ಟಿಯಾಳದೊಳಿಳಿಯೆ
ಎದೆಹೂವು ತಾನರಳಿ ಜೇನ ತುಂಬಿರಲು
ದೃಷ್ಟಿಯಿಂದಲಿ ಸೃಷ್ಟಿಯನ್ನರ್ಚಿಸಲಣಿಯಾಗಿ
ಆ ಹೂವನರ್ಪಿಸಲೇ ಹಗುರವಾಗಿರಲು
ಡಿ.ನಂಜುಂಡ
10/04/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ