ಶನಿವಾರ, ಫೆಬ್ರವರಿ 28, 2015

ಉತ್ತರಿಸು

ಬಾ ಹಕ್ಕಿ ಹತ್ತಿರಕೆ ಹಾರು ಬಾ ಎತ್ತರಕೆ
ಬತ್ತದಾ ಬಾನ್ದನಿಯ ಬಿತ್ತರಿಸು ಬಾ
ನೀನುತ್ತಿದಾ ಬಾನಿನಲಿ ಕತ್ತಲೆಯು ಎಲ್ಲಿ?
ನನ್ನೆಲ್ಲ ಪ್ರಶ್ನೆಗಳಿಗುತ್ತರಿಸು ಬಾ

ಬೆಳಗಾಗುವಾ ವೇಳೆ ತಿಳಿಯುವಾ ಬಗೆ ಹೇಗೆ?
ಕಾಳ್ಗಳಿರುವಾ ಸುಳಿವನಿತ್ತವರು ಯಾರು?
ನೀಲದಾಗಸದಲ್ಲಿ ಮೇಲೇರಿ ಕೆಳಗಿಳಿವ
ಕಾಲತಾಳಗಳರಿವನೆರೆದವರು ಯಾರು?

ಹಣ್ಣುಗಳ ತಿಂದುಂಡು ಬೀಜಗಳನುಗುಳುಗುಳಿ
ಬನವ ನೀ ಬೆಳೆಸೆಂದು ಹೇಳಿದವರಾರು?
ಗೋವುಗಳ ಮೈಕುಕ್ಕಿ ಉಣುಗುಗಳ ಕಿತ್ತೆಸೆವ
ಸಹಕಾರದಾ ಸಾರವರುಹಿದವÀರಾರು?

ಕವಿಯೆದೆಯ ಗರ್ಭದಲಿ ಪ್ರತಿಯುಲಿಗೆ ಕಾವಿರಿಸಿ
ಕವಿತೆಗಳ ಸಂತತಿಯ ಬೆಳೆಸುತಿಹೆ ನೀನು
ಭಾವಪಕ್ಷಿಯ ರೆಕ್ಕೆ ಬಲಿವಾಗ ನಲಿನಲಿದು
ಬುವಿಯಗಲ ಹಗಲೆರೆವ ರವಿಯು ನಾನು.

ಡಿ.ನಂಜುಂಡ
28/02/2015


ಮಂಗಳವಾರ, ಫೆಬ್ರವರಿ 17, 2015

ಪದಸಂಚಲನ

ದುರ್ಗಮ ಮನವನದಂತರತಮಶಿವ-
ಪದಸಂಚಲನದ ದನಿ ಕೇಳಿ
ಭಾವೋತ್ಪಲಗಳ ಕಾವ್ಯೋದ್ಯಾನದಿ
ವಾಗರ್ಥಗಳಾ ರತಿಕೇಲಿ

ಮತಿಗಿರಿಜಾಸಹನಾಟ್ಯದ ವೇಳೆ
ಚಿತ್ತಾಂತರ್ಯದ ಶಿಲೆಗಳ ಮೇಲೆ
ಸತ್ಯಾತ್ಮನ ಸುಖಶಾಂತಿಯ ಮೌನಕೆ
ಓಂತರುಪಲ್ಲವ ಶರ ಸೋಕೆ

ಜಿಹ್ವಾಮೂಲದಿ ಘಂಟಾಧ್ವಾನ
ಅಕ್ಷರಬಂಧಕದಾಹ್ವಾನ
ಸ್ವರವ್ಯಂಜನದಾಲಿಂಗನದಲಿ
ಕವಿತಾ ಮೃದುಪದಸಂಚಲನ

ಡಿ.ನಂಜುಂಡ
17/01/2015