ಭಾನುವಾರ, ಆಗಸ್ಟ್ 10, 2014

ಸುಂದರ!

ಬಕ್ಕ ತಲೆಯ ಚೆಲುವ ನೋಡೆ
ಎಂಥ ಸುಂದರ!
ಮೀಸೆ ತಿರುವಿ ಹುರಿಯ ಮಾಡೆ
ಎಂಥ ಬಂಧುರ!

ಅಗೋ! ನೋಡು ನಡಿಗೆಯಂದ;
ದಾಪುಗಾಲನಿಡಲು ಚಂದ;
ಎಲ್ಲಕಿಂತ ಅಂದವವನ
ಗಟ್ಟಿ ಬಾಹುಬಂಧ.

ಹಣೆಯ ಮೇಲೆ ನೆರಿಗೆ ಮೂಡೆ;
ಮೂಗ ತುದಿಗೆ ಬೆವರ ನೋಡೆ;
ಎಂಥ ಚಂದ! ಚಿಂತೆಗಳನು
ಗುನುಗಿ ಗುನುಗಿ ಹಾಡೆ.

ಗಡಸು ದನಿಯ ಮಾತುಗಳನು
ಕೇಳಲೆಂಥ ಚಂದ;
ಸಿಡುಕು ಮಾಡೆ ಕಣ್ಣ ತುದಿಯ
ಕೆಂಪು ನೋಡಲಂದ.

ಡಿ.ನಂಜುಂಡ
10/08/2014


ಬುಧವಾರ, ಆಗಸ್ಟ್ 6, 2014

ಭಾವವರ್ಣ

ಯಾವ ಭಾವದ ಬಣ್ಣದೋಕುಳಿ
ಹೂವಿನಂದದಿ ಬೆರೆಯಿತು?
ಯಾವ ಹೂವಿನ ಚಂದವಾರಿಸಿ
ಭಾವಬಿಂಬವು ತುಳುಕಿತು?

ಮೊಲ್ಲೆ ಹೂಗಳ ನಗುವಿನಂದವು
ನಲ್ಲೆಯಾ ಮೊಗವಾಯಿತೆ?
ಚೆಲ್ಲುತಿರೆ ಬೆಳ್ನೊರೆಗಳೆಲ್ಲವು
ಗಲ್ಲವನು ಪಿಡಿದೆತ್ತಿತೆ?

ಕೆಂಗುಲಾಬಿಯು ಮುಡಿಗೆ ಬಂದು
ರಂಗುಗೆನ್ನೆಯೊಳಿಳಿಯಿತೆ?
ಅಂಗಳದ ಕೆಂದುಂಬೆ ನತ್ತದು
ಮಂಗಳವನೈತಂದಿತೆ?

ಎದೆಗೆ ಬಿದ್ದಿಹ ಪದಗಳೆಲ್ಲವು
ಹೃದಯದೊಳು ಜಿನುಜಿನುಗಿತೆ?
ಸದಭಿರುಚಿಸುಮವರ್ಣವರ್ಣವು
ನಾದಮೂಲದೊಳಡಗಿತೆ?

ಡಿ.ನಂಜುಂಡ
06/08/2014



ಮಂಗಳವಾರ, ಆಗಸ್ಟ್ 5, 2014

ಸೋಲೇ ಗೆಲುವಿನ ಸೋಪಾನ

ಸೋಲೇ ಗೆಲುವಿನ ಸೋಪಾನ
ಬಾಳೊಳು ಅದುವೇ ಸಂಮಾನ

ಅಡಿಗಡಿಗೆಡುವುತ ಮುನ್ನಡಿಯಿಟ್ಟರೂ
ನಡತೆಯು ಒಳಿತಿರಲವ ಜಾಣ
ಗಡಿಬಿಡಿಯಿಂದಲಿ ತಡವರಿಸಿದರೂ
ನುಡಿಗಳು ಶುಚಿಯಿರಲದೆ ಮಾನ

ಮದ್ಯದ ಅಮಲಲಿ ಪದಗಳನಾಡುತ
ವಿದ್ಯೆಯ ಬೋಧಿಸೆ ಅವಮಾನ
ಗದ್ದಲ ತುಂಬಿರೆ ಮನದಾಳದೊಳಗೆ
ಬುದ್ಧಿಯಿರುವುದೇ ಅನುಮಾನ

ಬಿದ್ದವನೇಳದೆ ಮಲಗಿಯೆ ಇದ್ದರೆ
ಸದ್ಯವೆ ಸೋಲಿದೆ ತಿಳಿ ಜಾಣ
ಬಿದ್ದವನೇಳುತ ಗೆಲುವೆಡೆಗಡಿಯಿಡೆ
ಬುದ್ಧನ ಪದವಿಗೆ ಸೋಪಾನ

ಡಿ.ನಂಜುಂಡ
05/08/2017



ಶನಿವಾರ, ಆಗಸ್ಟ್ 2, 2014

ಮಳೆ

ಕಾರ್ಮೋಡಗಳೋಡೋಡುತ ಬರುತಿವೆ, ಮಲೆನಾಡಿನ ದಟ್ಟಡವಿಯ ನೋಡಿ
ಕಡಲಲೆಯುಬ್ಬರವೆಲ್ಲವನೆಳೆದೆಳೆದಾಡುತಲಬ್ಬರದೊಡಗೂಡಿ

ಹೆಮ್ಮರಗಳು ಜಿಗಿದಾಡುತಿವೆ; ಗಿಡಗಳು, ದಡಿಗಳು ಬಾಗುತಿವೆ
ಜಡಿಮಳೆಯಾರ್ಭಟತಾಂಡವನಟನೆಯ ನೀರಾಟಕೆ ತಲೆಯೊಡ್ಡುತಿವೆ

ಚಂಡಾಕಾರದಿ ಬೀಸುವ ಗಾಳಿಗೆ ಮರಗಳ ಹರೆಗಳು ಮುರಿಯುತಿವೆ
ಹಸಿರೆಲೆಗಳು ನುಜ್ಜಾಗುತಲುದುರಿವೆ; ಹರಿಯುವ ನೀರಲಿ ತೇಲುತಿವೆ

ಕೆಮ್ಮಣ್ಣಿನ ಕಣಗಳೊಡೆಯುತಿವೆ; ಹೊನಲಿಗೆ ಸೀರೆಯನುಡಿಸುತಿವೆ
ಹಸಿರೆಲೆಪುಡಿಗಳು ಹೊಳೆಯುಡುಗೆಯ ಹೊಸ ಮೆರುಗಿನ ಚಿತ್ರಗಳಾಗುತಿವೆ

ಭೋರ್ಗರೆಯುತ ಜಿಗಿದಿರೆ ನೀರ್ಕೋಡಿ; ಕಾರ್ಗಲ್ಲಿನ ಶಿವನೆಡೆಗೋಡಿ
ಬೆಳ್ನೊರೆ ನಗುಮೊಗವುಕ್ಕಿಹ ಗಂಗೆಯು ಅವತರಿಸಿಹಳಲ್ಲಿಯೆ ನೋಡಿ

ಆಹಾ! ಮಳೆ! ಮಳೆ! ಬಿರುಗಾಳಿ; ಸುಂಯ್ ಗುಡುತಿರಲಾ ಚಳಿಗಾಳಿ
ಹಕ್ಕಿಗಳೆಲ್ಲವು ಗೂಡನು ಸೇರಿವೆ,ಕಪ್ಪೆಗಳವು ವಟಗುಟ್ಟುತಿವೆ

ಮುದುರಿದ ಕೈಕಾಲದುರುತಿವೆ; ಕಂಬಳಿಗಳನೆಳೆದಾಡುತಿವೆ
ಕೋಣೆಯೊಳಡಗಿಹ ಮಕ್ಕಳ ಕೈಗಳು ಹಪ್ಪಳÀದಂಚನು ಮುರಿಯುತಿವೆ

ಮಲೆನಾಡಿನ ಮಳೆಗಾಲವು ಇಂತಿರೆ, ಎಲ್ಲವು ಪ್ರತಿಮೆಗಳಾಗುತಿರೆ
ಹಸಿರುಡೆಗಳನುಟ್ಟಂತಿಹ ಹೊಲಗಳ ಬಸಿರಲಿ ಮೊಳಕೆಗಳೊಡೆಯುತಿರೆ

ಬಗೆಬಗೆ ರೂಪದ ಪ್ರಕೃತಿಯಲಿ ಮೈಮನಗಳ ಲಯಗೊಳಿಸುತಲಿ
ಶ್ರಾವಣಮಾಸದ ಹಬ್ಬದ ಪೂಜೆಗೆ ಹರುಷದಲೆಲ್ಲವನರ್ಪಿಸಲಿ

ಡಿ.ನಂಜುಂಡ
02/08/2014