ಬಗೆಬಗೆಯ ಭಾವಗಳ ಬಣ್ಣದೋಕುಳಿಯಾಗಿ
ಬಾಗಿ ಬಾ ನೀ ಬಯಲ ಬರಹವಾಗಿ
ಆ ಬಯಲೆ ತಾ ಬಯಸಿ ಬಾನ್ದನಿಯ ಒಳಸಾಗಿ
ಬಿಸಜವಾಗರಳುತಿರಲೆದೆಗೆ ತಾಗಿ
ಗಂಧಲೇಪಿತ ಮಂದ ಮಧುವಾತದಿಂದಾಗಿ
ಸೃಷ್ಟಿಸೌಂದರ್ಯರಸವೃಷ್ಟಿಯಾಗಿ
ಹೃದಯಾಭಿಷಿಕ್ತಪದ ತಾ ಸಂಚಲನವಾಗಿ
ಅರ್ಥದರ್ಪಣಭಾವಬಿಂಬವಾಗಿ
ಅಕ್ಷರಾಕ್ಷರಬಂಧದಾನಂದಚೈತನ್ಯ
ತಾನಂತರಾಹಿತ್ಯವಿಸ್ತಾರವಾಗಿ
ಪಂಚಭೂತಾತ್ಮ ಪಂಚಾನನಪ್ರೀತ ಪಂ-
ಚಾಕ್ಷರೀಮಂತ್ರದಾ ತಂತುವಾಗಿ
ಪಂಚಕರಣಗಳಿಂದ ಸಂಕರ್ಷಿತೇಕೈಕ-
ದಿಂಚರವು ಸಂತತದ ಧಾರೆಯಾಗಿ
ಧ್ಯಾನಧಾರಣಗಮ್ಯ ವಿಷಯವೇ ತಾನಾಗಿ
ವಾಕ್ಕಾಯಮನಗಳಲಿ ಲೀನವಾಗಿ
ಬಾ ಕಾವ್ಯವಾಗಿ ಬಾ ದಿವ್ಯತೇಜೋಪುಂಜ-
ವಾಗಿ ಹೃತ್ ರಮ್ಯವನಚೈತ್ರವಾಗಿ
ಛಂದೋವಿಲಾಸ ಪ್ರಪಂಚವೇ ಬಾ ಭವ್ಯ-
ನಿತ್ಯಾನುಸಂಧಾನವಾಗರ್ಥವಾಗಿ
ಸಚ್ಛಿದಾನಂದಶಿವಮೂರ್ತಿಯಾಗಿ
ಡಿ.ನಂಜುಂಡ
03/11/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ