ಭಾನುವಾರ, ಜನವರಿ 15, 2017

ಮನ್ ಕೀ ಬಾತು

ತಪ್ಪು ಭಾವಿಸಬೇಡಿ ಜೊತೆಗೆ ಬಂದಿಹೆನೆಂದು
ಎಲ್ಲರೂ ಒಪ್ಪಿ ಆಗಿಹೆನು ಸಂಗಾತಿ
ಕೇಸರೀಬಾತೆಂಬ ಹುಟ್ಟು ಹೆಸರಿದೆಯೆನಗೆ
ಉಪ್ಪಿಟ್ಟ ಹೃದಯವನು ಪ್ರೀತಿಸಿದ ಗೆಳತಿ

ರವೆಯುಂಡೆಯಕ್ಕನೊಡೆ ಬಂದವರು ಗೊತ್ತಿದೆಯೆ?
ರವೆಯಿಡ್ಲಿಯೆನ ಬಾವ; ಒಳ್ಳೆ ಗುಣದವರು
ರವೆಯ ಮನೆತಕೆಲ್ಲ ಪರಿಮಳವ ತಂದಿತ್ತ
ಮಾವೊಳ್ಳಿ ಮಯ್ಯರೂ ನಮ್ಮ ಹರಸಿಹರು

ಕೇಸರಿಯ ಬಣ್ಣದುಡೆಯುಟ್ಟಿರುವ ನನ ಕಂಡು 
ಕೇಸರಿಯ ಪಡೆಯನ್ನು ಕಟ್ಟುತಿಹರು
ಉಪವಾಸ ನೇಮವಿರೆ ತಪವ ಮಾಡುವ ಜನರೂ
ಜಪಮಧ್ಯ ನಮ್ಮನ್ನೆ ನೆನೆಯುತಿಹರು

ಯಾವುದೇ ಸಭೆಯಿರಲಿ ನಡುವೆ ಹೊರನಡೆಯದೆಯೆ
ಕೊನೆವರೆಗೆ ಮರೆಯದೆಯೆ ಕುಳಿತಿರುವೆವು
ಗಲಭೆ ಗದ್ದಲ ಗೌಜಿನಿಂದಾದ ಒತ್ತಡವ
ಕ್ಷಣದೊಳಗೆ ತಣಿಸಲಿಕೆ ಕಾದಿರುವೆವು
ಎಲ್ಲರಿಗು ಬೇಕಾಗಿ ಬಾಳುತಿಹೆವು

ಡಿ.ನಂಜುಂಡ
15/01/2017



ಶನಿವಾರ, ಜನವರಿ 14, 2017

ಬಯಕೆ


ಎಂದೂ ಮುಗಿಯದ ಧಾರಾವಾಹಿಗ-
ಳಂತೆಯೆ ನಮ್ಮೊಳ ಬಯಕೆಗಳು
ಒಂದೊಕ್ಕೊಂದೂ ಹೊಂದಿಕೆಯಾಗದ
ಮನಕಂಟಿಹ ಬಂದಳಿಕೆಗಳು

ನೋಡಲು ಆಗದು ನೋಡದಿರಾಗದು
ಬಿಡದೆ ಕಾಡುವಾ ಕಷ್ಟಗಳು
ಗಮನವ ಕೊಡದೆ ಮುಂದಕೆ ಹೋದರೆ
ಎಳೆಯುತ್ತವೆ ದೆವ್ವಗಳು

ಹೂವೆನ್ನುತ ಮುಡಿಗೇರಿಸ ಹೊರಟರೆ
ಬುಸುಗುಡುತಲಿ ಹಾವಾಗುವುವು
ತೆಗೆದೊಗೆದರೆ ಮರು ಕ್ಷಣದೊಳಗಲ್ಲೇ
ಮುಳ್ಳೊಲು ಕಾಲಿಗೆ ಚುಚ್ಚುವುವು

ಇನ್ನಿವುಗಳ ಸಹವಾಸವೆ ಬೇಡ
ಎಂದರೂ ಕೂಡ ಬಿಡೆವೇಕೋ?
ವರುಷಕೆ ಒಂದಡಿ ಮುಂದಕೆ ಹಾಕುವ
ಹಿತ್ತಲ ಬೇಲಿಯ ಹಾಗೇಕೋ?


ಡಿ.ನಂಜುಂಡ

14/01/2017

ಹೇ ಶಂಕರಿ !

ಹೇ ಶಂಕರಿ ಶಾಕಂಭರಿ
ಶಂಕರಾರ್ಧರೂಪಿಣಿ
ನಿತ್ಯಹರಿದ್ವರ್ಣಾಂಬರ-
ಧಾರಿಣಿ ಭವತಾರಿಣಿ

ಜೀವಕೋಟಿಸಂರಕ್ಷಿಣಿ
ಪ್ರಾಣಶಕ್ತಿಪೂರಿಣಿ
ಪಾಹಿ ಪಾಪನಾಶಿನಿ ಹೇ
ಸೃಷ್ಟಿಬೀಜವಾಪಿನಿ

ಮೌನಾಂಬುಧಿಮಥನಜಾತ
ಚಂದ್ರಾಮೃತವರ್ಷಿಣಿ
ಧ್ಯಾನಾಚಲಮೂಲಸ್ಥಿತ
ವನಮಂದಿರವಾಸಿನಿ

ಸರ್ವೌಷಧ ಸಂಗೋಪಿನಿ
ಸರ್ವಾಪಗಚಾಲಿನಿ
ಸರ್ವವರ್ಣ ಪರಿಶೋಭಿತ
ಸುಂದರ ಸರ್ವಾಂಗಿನಿ

ಡಿ.ನಂಜುಂಡ

14/01/2017

ಬುಧವಾರ, ಜನವರಿ 11, 2017

ಮಾತಿಲ್ಲದ ಕವಿತೆ

ನಲಿಯುತಿಹಳು ಹೃದಯದಲ್ಲಿ
ಮಾತಿಲ್ಲದ ಕವಿತೆ
ನಗದಿಲ್ಲದೆ ನಗುತಿಹಳಾ
ಬಹು ವ್ಯಾಪಾರಸ್ಥೆ

ಅರ್ಥಶಾಸ್ತ್ರ ಪಾರಂಗತೆ
ಅಲಂಕಾರ ರಹಿತೆ
ಅರ್ಥವಾಹಗಂಗೆಯಂತೆ
ಅವಳ ಮೌನಗೀತೆ

ಸಾವಿರಾರು ಪದಗಳೇಕೆ
ತನಗೆಂದಳು ಮೌನೆ
ಸಾವಿರದಾ ಪದವೊಂದೇ
ಸಾಕೆಂದೆಳು ಜಾಣೆ

ಮಾತೆಲ್ಲವು ಮುಗಿದರೂ
ಮುಗಿಯದರ್ಥಧಾರೆ
ಬಾನ್ಗಡಲಿನ ಅಲೆಯನೇರಿ
ಸಾಗುತಿಹಳೆ ತಾರೆ?

ಡಿ.ನಂಉಂಡ
11/01/2017