ಕರ್ಮಫಲವೀವ ಶನಿದೇವನೇ ಪರತತ್ತ್ವ
ಧರ್ಮಮಾರ್ಗಗಳನ್ನು ತೆರೆಯುವನು ನಿತ್ಯ
ಮಂದಗತಿಯಲಿ ಮತಿಯ ಮಥಿಸಿ ಮೋಹವನಳಿಸಿ
ಅಂತರಂಗವ ಬೆಳಗಿ ತೋರುವನು ಸತ್ಯ
ಅದು ಬೇಕು ಇದು ಬೇಕು ಎಂದು ಮನವೋಡುತಿರೆ
ದುಃಖಗಳ ತಡೆಗೋಡೆಯೊಂದ ತಂದೊಡ್ಡಿ
ವಿಷಯೋಪಭೋಗಗಳಲಂಟು ಬರದಾ ಹಾಗೆ
ಪಾಪಗಳ ಲೆಕ್ಕಕ್ಕೆ ನೀಡುತಲಿ ಬಡ್ಡಿ
ಈ ಜಗವೆ ನನಗಾಗಿ ನಾನೊಬ್ಬನಿದರೊಡೆಯ
ಎಂಬಂತೆ ಮಾನವನು ಬೀಗುತಿರಲಿಹದಿ
ಭಾವಾಗ್ನಿಜ್ವಾಲೆಯಲಿ ಸ್ವಾರ್ಥಬೀಜಗಳಿಟ್ಟು
ಸುಟ್ಟು ಕರಕಲುಗೊಳಿಸಿ ಮುಗುಳುನಗುಮೊಗದಿ
ಅಲ್ಪತೃಪ್ತನಿಗೆ ಅತಿಶಯದ ಸುಖಗಳನಿತ್ತು
ಅತಿಲೋಭಿಗಾತಂಕದುದ್ವೇಗವಿತ್ತು
ಜ್ಞಾನವೈರಾಗ್ಯಗಳನೀಯುತಲಿ ಸಾಗುವನು
ಸಮತೂಕದಲಿ ಸಚ್ಚಿದಾನಂದವುತ್ತು
ಡಿ.ನಂಜುಂಡ
22/11/2017
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ