ಮಂಗಳವಾರ, ಡಿಸೆಂಬರ್ 12, 2017

ವರವಾಗಿ ಬಂತೆ ಕಾಗೆ!?

ಕರಿಯುಂಡ ಕಾಗೆ ಕಾಯೆಂದು ಕೂಗೆ
ಹರಿವೊಂದು ಹರಿಯುತೆದೆಗೆ
ಹರ ತಾನು ಬಾಗುತರಿವೊಳಗೆ ಸರಿದು
ಗುರುವಾಗುತೆದ್ದ ಹಾಗೆ

ನರನರರÀ ನಂಜ ಮಾತುಗಳ ಹಿಂಜಿ
ಕರಿಯಾಗುತಿರಲು ರಾತ್ರಿ
ಸರಿಗೊಳಿಸಲದನು ಹಗಲೆಡೆಗೆ ತೂರಿ
ತಿರುತಿರುಗುತೇಳೆ ಧಾತ್ರಿ

ಒಳಗೆಲ್ಲ ತುಂಬಿ ತುಳುಕಾಡುತಿರುವ
ಕೊಳೆಗಳನು ಹೊರಕೆ ತೂರಿ
ಬೆಳಕೊಂದು ಬಂದು ಬೆಳಗಾಯಿತೆಂದು
ತಿಳಿಹೇಳಿದಂತೆ ಸೂರಿ

ಧರೆಯೆಸೆದ ಕರಿಯನರೆದರೆದು ಕುಡಿದು
ಗಿರಿಯತ್ತ ಹಾರಿ ಸಾಗೆ
ಅರಿವೊಳಗೆ ಕುಣಿವ ನಂಜುಂಡನಂತೆ
ವರವಾಗಿ ಬಂತೆ ಕಾಗೆ!?

ಡಿ.ನಂಜುಂಡ
12/12/2017




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ