ಶನಿವಾರ, ಡಿಸೆಂಬರ್ 16, 2017

ಕಚ್ಚು ಬಾ, ಸೊಳ್ಳೆ!

ಗೊಚ್ಚೆಯಿಂದೆದ್ದು ಬಾ, ಸೊಳ್ಳೆ ನೀ ಹಾಡುತ್ತ
ಕಚ್ಚು ನಾನೆಚ್ಚರದಲೇಳುವಾ ಹಾಗೆ
ಸ್ವಚ್ಛಗೊಳ್ಳುವೆನೆಂದು ಮೈಮನವ ತೊಳೆತೊಳೆದು
ರೊಚ್ಚುಗಳನಲ್ಲಲ್ಲಿ ನಿಲ್ಲಿಸದ ಹಾಗೆ
ಸ್ವಚ್ಛಭಾರತವೆಂಬ ಸಂಕಲ್ಪದರ್ಥವನು
ತಿಳಿವರೆಗೆ ಕೆಂಪಚ್ಚುಗಳ ನರಗಳಲ್ಲಿ
ಮೂಡಿಸುತ ಮೈಕೊಡವಿ ಮೇಲೆದ್ದು ಬರುವಂತೆ
ಗುಂಯಿಗುಡುತಲಿರು ನೀ ಮನೆಮನೆಗಳಲ್ಲಿ
ಸೂಕ್ಷ್ಮಾಣುಜೀವಿಗಳು ತಿನ್ನದಿಹ ವಸ್ತುಗಳ-
ನಲ್ಲಲ್ಲಿ ಒಗೆಯುತಿರೆ ನೀನಲ್ಲಿ ಹುಟ್ಟು
ಜಗಿಜಗಿದು ಕಂಡಲ್ಲಿ ಉಗಿದುಗಿದು ಕೆಂಪಾದ
ಗುರುತುಗಳ ತಂದು ನೀ ಮೈಮೇಲಕೊಟ್ಟು
ಪರಿಸರದ ಭಾಗದೊಲು ನಾನಿರುವ ಕಾಲವದು
ಬರುವವರೆಗೂ ನಿನ್ನ ಸಂತಾನವಿರಲಿ
ಎಲ್ಲ ನನಗಾಗೆಂಬ ಸ್ವಾರ್ಥದಾ ಸೋಗಿರಲು 
ನಿನ್ನಿರವು ಸರ್ವಾರ್ಥದರಿವಿಗಾಗಿರಲಿ
ಡಿ. ನಂಜುಂಡ
16/12/2017


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ