ಭಾನುವಾರ, ಸೆಪ್ಟೆಂಬರ್ 21, 2014

ಝೇಂಕಾರ

ಹೂವಿನಧರದ ಮಧುವು ಜಾರಿ ಹೋಗದ ಹಾಗೆ
ಹೀರಲಾತುರ ತೋರಿ ಹಾರುತಿರೆ ದುಂಬಿ
ಹೃದಯಕುಸುಮದ ಜೇನ ಚಿತ್ತಭ್ರಮರವು ಬಯಸಿ
ಝೇಂಕರಿಸಿ ಹಾಡುತಿದೆ ಎದೆಯ ತುಂಬಿ

ಭಾವವದು ಬಾನಗಲ ಬಾಗಿ ತಾ ಬಿಲ್ಲಾಗಿ
ಸಪ್ತವರ್ಣಗಳಾಗಿ ಚಿತ್ರವಾಗೆ
ಓಂಕಾರನಾದಾಂತದಕ್ಷರಾಲಿಂಗನಕೆ
ರಸನದಿಂ ಪದಗಳಭಿಷೇಕವಾಗೆ

ಸಪ್ತಾಗ್ನಿಜಿಹ್ವೆಗಳಲಾ ವಾಣಿ ಪ್ರಜ್ವಲಿಸಿ
ಕಣಕಣದಲನುರಣಿಸಿ ಗೀತವಾಗೆ
ಸೃಷ್ಟಿಯಾನಂದರಸಪರಿಪಾಕಪೂರ್ಣತೆಯ
ಸಂಕಲ್ಪಸಂಚಾರದಾಲಾಪವಾಗೆ

ಆಕಾಶದಾದ್ಯಂತ ಮಧ್ಯಾಂತರಾಲದೊಳು
ಭಾವವರ್ಣವು ಕಮಲದಲಗಳಾಗೆ
ಸುಮನಾಲದಾಂತರ್ಯ ಮಧುರಸಾಸ್ವಾದನೆಯು
ಚಿತ್ತಷಟ್ಪದದಿಷ್ಟವೃತ್ತಿಯಾಗೆ

ಡಿ.ನಂಜುಂಡ

21/09/2014

1 ಕಾಮೆಂಟ್‌: