ಶುಕ್ರವಾರ, ಅಕ್ಟೋಬರ್ 3, 2014

ಹಬ್ಬಗಳಾವಳಿ

ಆಹಾ! ಬಂದಿತು ಹಬ್ಬಗಳಾವಳಿ;ಮನೆಮನೆಯಲಿ ಸಂಭ್ರಮಕೇಲಿ
ಅಡುಗೆಯ ಪಾತ್ರೆಗಳಾಡುತಿರೋಕುಳಿ ವಿಧವಿಧ ಷಡ್ರಸಪಾಕದಲಿ 
ಮನವಿರೆ ಯೋಗಸಮಾಧಿಯಲಿ;ಸವಿ ಭೋಜನಸಂಸಿದ್ಧಿಯಲಿ
ಪಂಚೇಂದ್ರಿಯಗಳು ಒಂದೆಡೆಗೂಡಿವೆ;ಒಬ್ಬಟ್ಟಿನ ರುಚಿಕಟ್ಟಿನಲಿ

ಸಾರೊಳಗದ್ದಿಹ ಸೌಟಿನ ಸದ್ದಿಗೆ ಕಿವಿಗಳು ಎದ್ದೆದ್ದೇಳುತಿವೆ;
ರುಚಿರುಚಿಯಡುಗೆಗಳೂಟದ ಚಪಲಕೆ ರಸನದಿ ಜಲವೊಸರುಕ್ಕುತಿದೆ
ಹೊಟ್ಟೆಯು ಚುರುಗುಟ್ಟುತಿದೆ;ತೇಗುವ ಕ್ಷಣಗಳನೆಣಿಸುತಿದೆ
ಉದರದೊಳಗ್ನಿಯ ಜ್ವಾಲಾಮಾಲೆಯು ಯಾಗಸಮಾಪ್ತಿಗೆ ಕಾಯುತಿದೆ

ಅಟ್ಟದ ಮೇಲಿನ ಡಬ್ಬದೊಳಿಟ್ಟಿಹ ಹಪ್ಪಳಗಳು ಕೆಳಗಿಳಿಯುತಿವೆ
ಕುದಿಯುವ ಎಣ್ಣೆಯ ಬಾಣಲೆಯೊಳಗಡೆ ಮುಳುಗುತಲೇಳುತಲುಬ್ಬುತಿವೆ
ಬಾಳಕಗಳು ಗರಿಯಾಗುತಿವೆ; ಬಾಯೊಳಗಿಳಿಯಲು ಕಾಯುತಿವೆ
ತರತರ ಹೊಸ ತರಕಾರಿಗಳೆಲ್ಲವು ಹದದುರಿಯೊಲೆಯಲಿ ಬೇಯುತಿವೆ

ಮೊಳಕೆಗÀಳೊಡೆದಿಹ ಬಗೆಬಗೆ ಕಾಳ್ಗಳು ಗಜ್ಜರಿತುರಿ ಜೊತೆಗೂಡುತಿವೆ
ಹಸಿಮೆಣಸಿನ ತುಣುಕುಗಳೊಂದಿಗೆ ತೆಂಗಿನ ಸಂಗದೊಳಾಡುತಿವೆ
ಲಿಂಬೆಯ ರಸವನು ಹೀರುತಿವೆಸಾಸಿವೆಗಳು ಚಟಪಟಿಸುತಿವೆ
ಹಸಿ ಕೊತ್ತಂಬರಿ ಸೊಪ್ಪುಗಳಂದದಿ ಕೋಸಂಬರಿಯನು ಚುಂಬಿಸಿವೆ

ಬಂದಿತು ಕ್ಷಣವೊಂದಿನಿತೂ ಕಾಯದೆ ತುಪ್ಪದ ಘಮಘಮವೂಡುತಲಿ.
ಅಡುಗೆಯ ಮಂಗಳವಾದ್ಯದ ಸದ್ದಿರೆ ಸಟ್ಟಗದೊಳಮೈಕಟ್ಟಿನಲಿ
ತಂದಿಟ್ಟಿಹ ಹೊಸ ಬಟ್ಟಲಲಿ; ಕೈಬಾಯ್ಗಳ ಒಗ್ಗಟ್ಟಿನಲಿ
ಒಂದರ ಮೇಲೊಂದಡಿಗೆಗಳೆಲ್ಲವು ಉದರದೊಳಿಳಿದಿವೆ ಸರದಿಯಲಿ.

ಡಿ.ನಂಜುಂಡ
04/10/2015





2 ಕಾಮೆಂಟ್‌ಗಳು:

  1. ಕಂಡ ವಸ್ತುವನೆಲ್ಲ
    ಕವಿತೆಯಾಗಿಸುವ ಕ್ಷಮತೆ
    ಕರುಣಿಸಿಹನು ಪರಮ
    ನಿಮಗೆ ವರವಾಗಿ

    ಬಡಿಸಿಹಿರಿ ಪರಮಾನ್ನ
    ಭೋಜನದ ಮೃಷ್ಟಾನ್ನ

    ತಿನದಿದ್ದರು ತೇಗುತ
    ಕವಿತೆಯಲಿ ತೇಲುತ

    ಮುಗಿಯುವೆನು ಕೈಗಳನು
    ಧನ್ಯವನು ಹೇಳುತ

    ಪ್ರತ್ಯುತ್ತರಅಳಿಸಿ
  2. ನಿಮ್ಮ ಅಭಿಮಾನಕ್ಕೆ ಕೃತಜ್ಞತೆಗಳು ತಿರುಮಲ ರವಿಯವರೇ..

    ಪ್ರತ್ಯುತ್ತರಅಳಿಸಿ