ಅತ್ತ ಮುಗಿಲಲಿ ಬೆಳ್ಳಿ ಮೂಡಿತು
ಕತ್ತಲುದರವು ಸೀಳಿತು
ಮತ್ತಕೋಕಿಲಚಾರುನಿಸ್ವನ-
ವಿತ್ತ ಬುವಿಯೊಳು ಮೊಳಗಿತು
ಕಂದನೋರ್ವನು ಕಣ್ಣ ಬಿಟ್ಟನು
ಬಂದನಾ ಗಿರಿಯೋರೆಗೆ
ಅಂದಚಂದದ ರಂಗನಿತ್ತನು
ಇಂದು ನಿನ್ನೆಯ ಸಂಧಿಗೆ
ಬಾನ ಮಲ್ಲಿಗೆ ಹೂವ್ಗಳೆಲ್ಲವು
ಬನದ ಮಾಳಿಗೆಗಿಳಿಯಲು
ಮೌನಗಾನದೊಳವಿತ ತಾನಕೆ
ಹನಿಗಳಾಡುತ ಕುಣಿಯಲು
ಎಲ್ಲ ಖೇಚರಗಳಿಗೆ ಕಾತರ
ಬೆಳಕ ಹಬ್ಬದ ಸಡಗರ
ಮೇಲೆ ಹಾರುವ ದೂರ ಸಾಗುವ
ಕಾಳ ಹೆರಕುವ ಆತುರ
ಕಾಲತಾಳಕೆ ಕುಣಿವ ವಿಶ್ವದ
ಮೂಲದಲ್ಲಿರೆ ಸೂತ್ರವು
ನಾಳೆಯಾಗುವ ಸೂರ್ಯನುದಯಕೆ
ಬೆಳಕು-ಕತ್ತಲ ಗಣಿತವು
ಡಿ.ನಂಜುಂಡ
22/10/2014
ನನಗೆ ನೀವು ನವೋದಯ ಸಾಹಿತ್ಯದ ಆಧುನಿಕ ಕೊಂಡಿಯಂತೆ ಸದಾ ಗೋಚರಿಸುವುದು ಈ ಕಾರಣಕ್ಕೆ.
ಪ್ರತ್ಯುತ್ತರಅಳಿಸಿಎಂತಹ ಸುಮಧುರ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟಿದ್ದೀರ ಇಲ್ಲಿ...
ತೆಲುಗುವಿನ §ಲಲಿತ ಕಲಾರಾಧನಲೋ§ ಚಿತ್ರ ಗೀತೆಯಲ್ಲಿ ಮತ್ತಕೋಕಿಲ ಪದವನ್ನು ಲಾಲಿತ್ಯಪೂರ್ಣವಾಹಿ ಎಸ.ಪಿ.ಬಾಲು ಸಾರ್ ಹಾಡಿದ್ದಾರೆ.
shared at:
https://www.facebook.com/groups/191375717613653?view=permalink&id=435285689889320
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು. ಬದರಿಯವರೇ...
ಪ್ರತ್ಯುತ್ತರಅಳಿಸಿ