ಭಾವವೇ ಬಾ ಇಲ್ಲಿ ಭವಯೋಗಿಯಾಗು
ರವವಾಗಿ ಕಲವರಿತ ಕವಿತೆಯಾಗು
ಅಗೆಯಾಗಿ ಬಾಗು ಕಾಳ್ದೆನೆಯಾಗಿ ನೀ ತೂಗು
ಮೊಗದ ನಗುಹೂವಿನೊಳ ಮಕರಂದವಾಗು
ಸಾಗಿ ನೀ ಸಂಸಾರಕೃಷಿಭೂಮಿಫಲದೊಳಗೆ
ಜಗದಗ್ನಿಕುಂಡದೊಳು ನೈವೇದ್ಯವಾಗು
ಮುಗಿಲಾಗಿ ಮೇಲ್ಜಿಗಿದು ಮಳೆಯಾಗಿ ಕೆಳಗಿಳಿದು
ಬಗೆಬಗೆಯ ಜಲಮೂಲಚೈತನ್ಯವಾಗು
ಜಗದಗಲ ನೀ ಹರಡಿ ಝಗಮಗಿಪ ಬೆಳಕಾಗು
ಆಗಸದ ರವಿಯುದರಕಾಂತಿಯೊಳು ಬಾಗು
ಮಣ್ಣಾಗು ತರುಮೂಲಸಾರದೊಳು ಒಂದಾಗು
ಹಣ್ಣಿನೊಳ ತಿರುಳಾಗಿ ಪರಿಪಕ್ವವಾಗು
ಕಣ್ಣಾಗು ಕಷ್ಟಸುಖದಜ್ಞಾನರಾತ್ರಿಯಲಿ
ಅನ್ನರಸಕೋಶಾಗ್ನಿಪದಕೆ ಶರಣಾಗು
ಸೃಷ್ಟಿವೈವಿಧ್ಯಮಯವರ್ಣಾಂತರಾಲವದು
ದೃಷ್ಟ್ಯಾದಿ ಕರಣಗಳ ಗುರಿಯಾಗುತಿರಲಿ
ವ್ಯಷ್ಟಿಚಿಂತಿತವಸ್ತುವಿಷಯಾಜ್ಯಹುತವಾಗಿ
ಇಷ್ಟಿಪರಿಪೂರ್ಣತೆಯ ಸಂತುಷ್ಟಿಯಿರಲಿ
ಡಿ.ನಂಜುಂಡ
05/10/2014
ಸಕಾರಾತ್ಮಕ ಭಾವ ಚಿಂತನೆಯನ್ನು ಪ್ರೇರೇಪಿಸುವ ಕವನವಿದು.
ಪ್ರತ್ಯುತ್ತರಅಳಿಸಿತರುಮೂಲಸಾರ ಒಳ್ಳೆಯ ಪದ ಪ್ರಯೋಗ.
ತಮ್ಮನ್ನು ಫೇಸ್ ಬುಕ್ಕಿನ 3K ಗುಂಪಿಗೆ ಸೇರಿಸಿದ್ದೇನೆ. ಅಲ್ಲಿ ತಮ್ಮ ಬ್ಲಾಗನ್ನೂ share ಮಾಡಿದ್ದೇನೆ.
https://www.facebook.com/groups/kannada3K/permalink/435285689889320/