ಬುಧವಾರ, ಅಕ್ಟೋಬರ್ 29, 2014

ಏಕೆ?

ಬಯಲಲಿ ಹರಡಿಹ ದೇವನ ಕಾಣಲು
ಗುಡಿಗೋಪುರಗಳು ನಮಗೇಕೆ?
ಎಲ್ಲದರೊಳಗೂ ಸಮತೆಯ ಕಾಣಲು
ಗುಣವರ್ಣನೆಗಳು ಇರಬೇಕೆ?

ನಮ್ಮೊಳಗಿರದಿಹ ಒಳ್ಳೆಯತನಗಳ
ಸ್ತುತಿಪಾಠಕೆ ಬಳಸುವುದೇಕೆ?
ಆಶಾಕುಸುಮಗಳೆಲ್ಲವ ಬಿಟ್ಟು
ಫಲಪುಷ್ಪಗಳರ್ಪಣೆಯೇಕೆ?

ಭಾವಾತೀತನಲೊಂದಾಗುವುದಕೆ
ಉದ್ವೇಗದ ಭಜನೆಗಳೇಕೆ?
ಅಂಟುಗಳಿಲ್ಲದ ದೇವನ ಪೂಜೆಗೆ
ಮಡಿಮೈಲಿಗೆಗಳ ನಂಟೇಕೆ?

ಡಿ.ನಂಜುಂಡ

29/10/2014

2 ಕಾಮೆಂಟ್‌ಗಳು:

 1. ಆಂಜನೇಯ ಗುಣಾಭಿಜಾನಾದ ನನ್ನಂತಹ ನರಾಧಮರಿಗೆ ಹೀಗೆ ಯಾರಾದರೂ ತಿವಿದೆಚ್ಚರಿಸುತಿರಬೇಕು. ಅದನ್ನೇ ತಾವಿಲ್ಲಿ ಮಾಡಿದ್ದೀರಿ! :)

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಸ್ವನಿಂದೆ ತರವಲ್ಲ
   ಪರನಿಂದೆ ತರವಲ್ಲ
   ಬೇಡವೆಂದೂ ಬದರಿ
   ತನ್ನ ಸ್ವಗುಣ ಬಿಡವೊಲ್ಲ

   ಅಳಿಸಿ