ಶುಕ್ರವಾರ, ಅಕ್ಟೋಬರ್ 10, 2014

ಬೆಳಕಿನ ಬಿಂಬ

ಬಿಳಿಯೊಳಗಿಳಿಯದೆ ಕಣ್ ಕಾಣುವುದೇ?
ಒಳದನಿಗೂಡದ ಪದವುಳಿಯುವುದೇ?

ಬಾನೊಳು ಬಾಗಿದ ಬಣ್ಣಗಳೇಳವು
ಬಳುಕುವ ಭಾವದಲಿಳಿಯುತಿವೆ
ಬೇಕುಗಳೆಲ್ಲದರೊಳಮೈಯಾಗಿಸಿ
ಬಿಂಬಕೆ ಮೋಹವ ತುಂಬುತಿವೆ

ಚಿತ್ತದಿ ಮೂಡುವ ಚಿತ್ರಗಳೆಲ್ಲವು
ಬತ್ತದ ಕನಸುಗಳಾಗುತಿವೆ
ತೀರದ ವಿಧವಿಧ ಬಯಕೆಗಳೆಲ್ಲವು
ಕವಿತೆಗಳೊಳದನಿಯಾಗುತಿವೆ

ಕಣ್ಣೊಳಗಿಳಿದಿಹ ವಸ್ತುಗಳೆಲ್ಲವು
ಕಾಮನಬಿಲ್ಲುಗಳಾಗುತಿವೆ
ಮುಗಿಯದ ಚಿತ್ರಗಳೋಕುಳಿಯಾಟಕೆ
ಪದಗಳು ಕುಣಿಕುಣಿದಾಡುತಿವೆ

ಬಣ್ಣಗಳೇಳವು ಬಿಳಿಯೊಳು ಬಾಗುತ
ಕಣ್ಣೊಳ ಬಿಲ್ಲಿನ ಶರವಾಗೆ
ಕಾಣುವುದೊಂದೇ ಬೆಳಕಿನ ಬಿಂಬವು
ಕನಸುಗಳೆಲ್ಲವು ಮರೆಯಾಗೆ.

ಡಿ.ನಂಜುಂಡ
11/10/2014


2 ಕಾಮೆಂಟ್‌ಗಳು: