ಬುಧವಾರ, ಅಕ್ಟೋಬರ್ 8, 2014

ಭೂಪ್ರಾರ್ಥನೆ

ಉತ್ತಿ ಎಮ್ಮಾಸೆಗಳ ಅಂಕುರದ ಒಳಗಿರ್ಪ
ಬತ್ತದಾ ಮಣ್ಣಿನೊಳ ಉತ್ಸಾಹಕ್ಕೆ ಶರಣು
ಅತ್ತಾಗ ತುತ್ತಿಡುವ ಸತ್ತಾಗ ಹೂತಿಡುವ
ನಿತ್ಯಪರಿಪೂರ್ಣತತ್ತ್ವಕ್ಕೆ ಶರಣು

ಭೂಮಿಮಾತೆ! ಸುಖಶಾಂತಿದಾತೆ!
ಅಭಯಪ್ರದಾತೆ!

ಆಕಾಶವಾಯ್ವಗ್ನಿಜಲಭೂತಸಂಶಕ್ತಿ-
ಯುಕ್ತಾತ್ಮಚೈತನ್ಯಸತ್ಯಸಂಗೀತೆ
ಭಕ್ತಿರಸಪರಮಾನ್ನನೈವೇದ್ಯಸಂಪ್ರೀತೆ
ಅಖಿಲಜಗಜೀವಕುಲಕೇಕೈಕ ಮಾತೆ

ಕಾಮಾದಿ ಷಡ್ವೈರಿ ದುಸ್ಸಂಗದಿಂದೆದ್ದ
ಮಮಕಾರಹವ್ಯಗಳನರ್ಪಿಸುವೆ ತಾಯೆ
ತಾಮಸಿಕ ಗುಣದೋಷದಾವರಣವನು ಹರಿದು
ಸಾಮರಸಗುಣಗಳಿಂದಾವರಿಸು ತಾಯೆ

ಆರೋಗ್ಯ ವೈರಾಗ್ಯ ಭವಯೋಗ್ಯ ಭಾಗ್ಯಗಳ
ಸಾರಥ್ಯದಿಂದಲೀ ರಥವು ಚಲಿಸುತಿರಲಿ
ಚರಯೋಗಸಂಸಿದ್ಧಭೋಗಸಂವೃದ್ಧಿಗಳು
ಪರಮಪದಸಂಬಂಧಸೂತ್ರದೊಳಗಿರಲಿ
ವರಭೂಮಿಮಾತೃಕೆಯ ಚರಣಗಳಲಿರಲಿ

ಡಿ.ನಂಜುಂಡ
08/10/20142 ಕಾಮೆಂಟ್‌ಗಳು:

  1. ನಮ್ಮದೇ ತಪ್ಪುಗಳ ಕಾರಣದಿ ರೌಧ್ರಾವತಾರವ ತಳೆವ ಪ್ರಕೃತಿ ಮತ್ತು ಸಹಸ್ರಾಪರಾಧಗಳ ಹೊರತು ಸಹಿಷ್ಣುವಾಗುವ ಕ್ಷಮಯಾ ಧರಿತ್ರೀ, ಇದನ್ನು ಸಮೀಕರಿಸುವ ಕವಿಯ ಕಿವಿ ಮಾತುಗಳು.

    ತುಂಬ ಮಾರ್ಮಿಕವಾದ ಭೂಪ್ರಾರ್ಥನೆ.


    ಕವಿತಾ ರಚನಾ ಕೌಶಲ್ಯದಲ್ಲಿ ಮನಸೆಳೆದದ್ದು ಸುದೀರ್ಘ ಏಕ ಪದ ವಾಕ್ಯ - ಸಾಲಿನ ರಚನೆಗಳು.

    ಪ್ರತ್ಯುತ್ತರಅಳಿಸಿ