ಬೇಸಿಗೆಯ ಬೆಂಗಾಡ ಬೇಗೆಯಲಿ ಬಸವಳಿಯೆ
ನೆರಳನೀಯುತ ಬಯಲ ಒಂಟಿ ಮರವು;
ತರಗೆಲೆಯ ತಳಹಾಸ ತಂಪಿತ್ತು ಹರಸುತಿರ-
ಲೆನಗೇಕೆ ಬೇಕು ಮತ್ತೊಂದು ವರವು
ಆ ಮರದ ಹಸಿರೆಲ್ಲವೆನ್ನುಸಿರ ಜಸವಾಗಿ
ಕಣಕಣದಿ ಹೊಸ ಹುರುಪಿನರಳ ಕುಣಿಸಿ
ಉಲ್ಲಾಸದಾ ಮಂದಹಾಸವನು ತಂದಿರಿಸಿ
ಎದೆಯಗಲ ನುಡಿಯಿಂಪ ಕಂಪ ಸೂಸಿ
ಬಿಸಿಲ ಬೆಂಕಿಯ ಹೊತ್ತು ತಂಪೆರವ ತರುದೇವಿ-
ಯವತರಿಸಿ ಆನಂದಸುಧೆಯ
ತರಲು
ಅದಕಿಂತ ಬೇರಾವ ದೇವತೆಯ ನಾ ಕಾಣೆ
ಮನಸುಮವನನುದಿನವು ಅಡಿಗಿರಿಸಲು.
ಡಿ.ನಂಜುಂಡ
04/04/2015
ಬಿಸಿಲ ಬೇಗೆಗೆ ಒದಗೋ ನಮ್ಮ ಹಳ್ಳಿ ಹಾದಿಯ ಹೊಂಗೆಯ ಮರವೇ ನನಗೂ ಅಸಲೀ ದೇವತೆ.
ಪ್ರತ್ಯುತ್ತರಅಳಿಸಿ