ಓಡಬೇಡವೆಲೆ ಕಾಲ! ಮನವು ಓಡುವ ಹಾಗೆ
ಎಡಬಿಡದೆ ನನ್ನೊಡನೆ ಮೆಲ್ಲನಾಡುತಿರು
ಸಡಗರದಿ ನಾನಿರಲು ನೀ ಮುಂದೆ ಹೋಗದಿರು
ಕಾಡುವಾ ಬೇಸರಕೆ ವೇಗಗುಂದದಿರು
ಕಷ್ಟವದು ಬಂದಾಗ ಮನವ ಮುಂದೆಳೆದು ನೀ-
ನಿಷ್ಟವಿರೆ ಹಿಂದೆಳೆದು ಸಂತುಲನಗೊಳಿಸು
ಸೃಷ್ಟಿತಾಳಕೆ ನಲಿವ ವಿಶ್ವದೃಷ್ಟಿಯ ಹಾಗೆ
ವ್ಯಷ್ಟಿರೂಪದೊಳೆನ್ನ ಸಂತುಷ್ಟಿಗೊಳಿಸು
ಹೂವರಳಿ ಕಾಯಾಗಿ ಪಕ್ವವಾಗುವ ಹಾಗೆ
ಜೀವನದ ಅನುಭವವು ತಾ ಮಾಗುತಿರಲಿ
ಭವಕರ್ಮಕೃತಫಲವು ತೊಟ್ಟು ಕಳಚುತಲುದುರಿ
ಶಿವಧ್ಯಾನದಾನಂದಮೌನವೊಂದಿರಲಿ
ಡಿ.ನಂಜುಂಡ
30/03/2015
ಕಾಲವನ್ನು ಸಾವಕಾಶವಾಗಿ ಕಾಲ ಕಾಲಕೊಲಿಯುವಂತೆ ನಿವೇದಿಸಿಕೊಂಡ ಪರಿ ನೆಚ್ಚಿಗೆಯಾಯಿತು.
ಪ್ರತ್ಯುತ್ತರಅಳಿಸಿಧನ್ಯವಾದಗಳು ಬದರೀನಾಥ್
ಪ್ರತ್ಯುತ್ತರಅಳಿಸಿ