ಉಚ್ಛ್ವಾಸವೇ ಸೃಷ್ಟಿ ನಿಃಶ್ವಾಸವೇ ನಾಶ
ಸ್ಥಿತಿಯುಸಿರ ಕುಂಭಕದ ಮಧುರ ಕ್ಷಣವು
ಆ ಕ್ಷಣದ ಕಲ್ಪನೆಗೆ ಭಾವಬಿಂಬವು ಫಲಿಸಿ
ಹೃದಯಮಧ್ಯದಿ ನೆಲೆಸೆ ಅದು ವಿಷ್ಣುವು
ಒಳಸೆಳೆದ ಉಸಿರಿನಾ ಶಕ್ತಿಯಿಂದಲಿ ಚಿಮ್ಮಿ
ಹೊಮ್ಮಿದಾ ಕಲ್ಪನೆಯು ಬ್ರಹ್ಮಲೀಲೆ
ಹೊರನೂಕಿದುಸಿರಿನಲಿ ವಿಷಯಗಳು ಮರೆಯಾಗೆ
ಅದು ನಮ್ಮ ಪರಶಿವನ ಲಯದ ಲೀಲೆ
ಉಚ್ಛ್ವಾಸಸಂಕಲ್ಪಸೃಷ್ಟಿಯದು ಒಳ ಬಂದು
ಕುಂಭಕದಿ ತಾ ನಿಂತು ಚಿತ್ರವಾಗಿ
ಭಾವಾಂತವರ್ಣವದು ತಾ ವಿಸ್ತಾರವಾಗೆ
ಜಗದಗಲ ಶೋಭಿಪುದು ವಿಷ್ಣುವಾಗಿ.
ಡಿ.ನಂಜುಂಡ
05/03/2015
ತ್ರಿ ಮೂರ್ತಿ ಕಾಯಕವನ್ನು ಉಸಿರಿನೊಡನೆ ಸಮೀಕರಿಸಿದ ಕವಿ ವಿಚಕ್ಷಣತೆಗೆ ಶರಣು.
ಪ್ರತ್ಯುತ್ತರಅಳಿಸಿ