ಶುಕ್ರವಾರ, ಮೇ 29, 2015

ಆಶಯ

ಬಾನಿನಗಲ ಮನವ ಚಾಚಿ
ಧ್ಯಾನಿಯಾಗಬೇಕು
ಗಾನಜಲಧಿಯಾಳಕಿಳಿದು
ಮೌನಿಯಾಗಬೇಕು

ಮತಿಯು ಮಥಿಸಿದಂತ ಮಾತು
ಋತಪಥದಲಿ ಸಾಗಬೇಕು
ಶ್ರುತಿಯ ಹಾಗೆ ಪ್ರತಿಪದವೂ
ಮಿತಗತಿಯಲಿ ತೇಲಬೇಕು

ಜನನಮರಣತತ್ತ್ವಜ್ಞಾನ-
ಮನನವಾಗಬೇಕು
ನಾನು ಎಂಬ ಪರಮಶತ್ರು-
ಹನನವಾಗಬೇಕು

ಜನಗಣಮನಗುಣಗಳೆಲ್ಲ
ವನದಿನಿದನಿಯಾಗಬೇಕು
ಮನೆಮನೆಗಳ ಮೇರೆ ಮೀರಿ
ಬಾನ್ದನಿಯಲಿ ಬಾಗಬೇಕು
ತಾನನವೇ ತಾನಾಗಬೇಕು.

ಡಿ.ನಂಜುಂಡ

29/05/2015

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ