ಶನಿವಾರ, ಅಕ್ಟೋಬರ್ 24, 2015

ನಾಳೆಗೇನು ತಿಂಡಿ?

ಹೇಳು ನಲ್ಲ! ನಾಳೆ ತಿನ್ನ-
ಲೇನು ತಿಂಡಿ ಮಾಡುವೆ?
ತವರಿನಲ್ಲಿ ಕುಳಿತ ನನಗೆ
ನೀನು ನೆನಪಾಗುವೆ

ಒಂದು ಲೋಟ ಕೆಂಪಕ್ಕಿಯನು
ಮೆಂತ್ಯದೊಡನೆ ನೆನೆಸಲೇ?
ಹಾಸಿಗೆಯಿಂದೆದ್ದು ರುಬ್ಬಿ
ದೋಸೆಯೆರೆದು ತಿನ್ನಲೇ?

ಏಳುವಾಗ ಕರೆಂಟಿಲ್ಲ-
ದಿದ್ದರೇನು ಮಾಡಲೇ?
ತಂಗಳನ್ನ ಕೂಡಿಸಿಟ್ಟು
ಚಿತ್ರಾನ್ನವನೂಡಲೇ?

ಇಲ್ಲ, ಇಲ್ಲ, ಸಾಧ್ಯವಿಲ್ಲ
ಹಸಿಮೆಣಸುಗಳಿಲ್ಲದೆ
ಫೋನಿನಲ್ಲಿ ನೀನೊಮ್ಮೆ…
ನೆನಪು ಮಾಡಬಾರದೆ?

ಅಷ್ಟಮಿಯಲಿ ತಂದಿಟ್ಟ
ಅವಲಕ್ಕಿಯ ತಿನ್ನಲೇ?
ಮುಗ್ಗಿದುದಕೆ ಮೊಸರನೆರೆದು
ಹೇಗೆ ತಿಂದು ಮುಕ್ಕಲೇ?

ಹೋಟೆಲ್ಲಿನ ತಿಂಡಿ ತಿಂದು
ಕಾಯಕವನು ಮುಗಿಸಲೇ?
ಉದರವಾಯುವುಬ್ಬರಿಸೆ
ತೇಗಿ ತೇಗಿ ತಗ್ಗಲೇ?

ಬೇಡ ಬೇಡಕಾಡ ಬೇಡ
ನಂಜುಂಡನ ನೆನೆಯುವೆ
ಮತ್ತೆ ಮತ್ತೆ ಗಂಜಿಯುಂಡು
ಇಹವನ್ನೇ ಮರೆಯುವೆ.

ಡಿ.ನಂಜುಂಡ
24/10/2015


ಶುಕ್ರವಾರ, ಅಕ್ಟೋಬರ್ 23, 2015

ಗಂಜಿ

ಎಲೆ! ಗಂಜಿಯನುಂಡವನೆ! ನಂಜುಂಡನೆ!
ಭಲೇ! ಗಂಜಿಯನುಂಡವನೇ!

ಬೆವರಿಳಿಸಿ ತಂದಂಥ ಕೆಂಪಕ್ಕಿ ಗಂಜಿ
ಭವತಾಪದುರಿಯಲ್ಲಿ ಬೆಂದಿರುವ ಗಂಜಿ
ಶವಪೂಜೆಗಣಿಯಾದ ನೆನೆಯಕ್ಕಿ ಗಂಜಿ
ಶಿವ! ನೀನು ಮೆಚ್ಚುವುದದಾವ ಗಂಜಿ?

ಉದರವೈರಾಗ್ಯದಲಿ ಬೇಯಿಸಿಹ ಗಂಜಿ
ಮದÀಮೋಹಕಾಮಗಳನದುಮಿಟ್ಟ ಗಂಜಿ
ಮುದವಿತ್ತು ತೊದಲುಲಿಯ ನುಡಿಸಿದಾ ಗಂಜಿ
ಹದವರಿತು ಬೇಯಿಸಿಹ ಬಾಳ ಗಂಜಿ

ಶಿವೆ ತಾನು ತವರಿನಲಿ ತಳವೂರಿ ಕುಳಿತಿರಲು
ಶಿವ! ನೀನು ಧ್ಯಾನದಲಿ ಬೇಯಿಸಿಹ ಗಂಜಿ
ಭವಭಾಗ್ಯದಕ್ಕಿಯದು ಬಡವರಕ್ಷತೆಯಾಗೆ
ಭವ! ನೀನು ಚಪ್ಪರಿಸಿ ಸವಿದಂಥ ಗಂಜಿ

ಡಿ.ನಂಜುಂಡ

23/10/2015

ಬುಧವಾರ, ಅಕ್ಟೋಬರ್ 21, 2015

ಮಲಗು

ಬಾಳಗಡಿಕಲ್ಲಿನಡಿ ಜಾಗವೆಷ್ಟಿದೆಯೋ?
ಆಸೆ ಕೋಟೆಯನಲ್ಲಿ ಕಟ್ಟುವಷ್ಟಿದೆಯೋ?
ಕಲ್ಲಿನಾ ಗಟ್ಟಿಯೊಡೆಯದಷ್ಟಿದೆಯೋ?
ಮೇಲೆನ್ನ ಹೆಸರೊಂದು ಕೆತ್ತುವಷ್ಟಿದೆಯೋ?

ಆಯಾಸ ಕಳೆವಷ್ಟು ಅಗಲವಾಗಿದೆಯೋ?
ಹಾರಿ ಕುಣಿಯುವ ಹಾಗೆ ಆಳವಾಗಿದೆಯೋ?
ಕ್ರೋಧಮೋಹಗಳೆಲ್ಲ ನೆಗೆಯುವಂತಿದೆಯೋ?
ಪಾಪಬಿಂಬವು ತುಂಬಿ ತುಳುಕುವಷ್ಟಿದೆಯೋ?

ಬೇಡವೆಲೆ ಚಪಲಮನ! ಮೇರೆಯೊಂದೇಕೆ?
ಕಣ್ಣು ಕಂಡಿಹ ಕಲ್ಲ ನಿಲುವೊಂದು ಸಾಕೆ?
ಸೃಷ್ಟಿಮೂಲದ ಚಿತ್ತಕಲ್ಪನೆಯ ಹರಹಿ
ತಾನಲ್ಲಿ ತಾನನವ ತಂತಾನೆ ಸಲಹಿ

ಜಗದಗಲ ತೂರಿ ಹೆಸರಕಂತೆಯನೆಲ್ಲ
ಬಯಲ ಬೆಳಕಲಿ ಸಾಗಿ ವರ್ಣದೊಳು ಬಾಗಿ
ವಿಸ್ತಾರಶೂನ್ಯದೊಳು ವಿಶ್ರಾಂತಿಯಾವರಿಸೆ
ಪೃಕೃತಿಗರ್ಭದಿ ಮಲಗು ಮಗುವಾಗಿ ಮಾಗಿ

ಡಿ.ನಂಜುಂಡ
21/10/2015