ಜಗದ ಕತ್ತಲೆಯಳಿಪ ಕರಿಯುಂಡ ಕಾಗೆಗಳೆ!
ಹಗಲ ಹಗುರದಿ ಕರೆದು ಹೆಗಲಿಗೆಳೆದು
ಸಾಗಿ ಸಾಲಾಗಿ ಕಾ ಕಾಯೆಂಬ ಕಲಸಿರಿಯ
ಬಾಗಿ ಬಾನ್ದನಿಯಲೆಯಲೆಗೆ ಬೆಸೆದು
ರವಿಯು ಕಾಣದ ಜಗವ ಕವಿಯ ಕಾಣ್ಕೆಯೊಳಿರಿಸಿ
ಭವದ ಭಾರವನಿಳಿಪ ಭಾವವಿರಿಸಿ
ನವರಸಗಳಂಬರದಿ ಸವಿಗಡಲ ಹನಿಹನಿಯು
ರವಮೇಘವಾಗುವÀಂತರ್ಥವಿರಿಸಿ
ಸುರಿಸುರಿದು ಸಂತತವು ಕವಿಕಲ್ಪಧಾರೆಯನು
ಹರಿಸಿ ಹರುಷದÀ ಹೊನಲ ಮಡಿಲದುಂಬುವಿರಿ
ಪರಪುಟ್ಟದಂಡಗಳ ಕಾವ್ಕೊಡುತಲೊಡೆದೊಡೆದು
ವರಕವಿಯ ನುಡಿಗೂಡಿನೆಡೆಗೆ ನೂಕುವಿರಿ
ಎದೆಗೊದೆವ ಕೂಸು ತಾ ತಾಯ ಮೊಗದೊಳು ಹುದುಗಿ
ಮೊದಲ ಪದದಿಂದಲ್ಲಿ ಗೀಚುತಿಹುದು
ಮುದದಿ ಮೆಲ್ಲನೆ ಮತ್ತೆ ಗಲ್ಲದಿಂ ಮೇಲೆಳೆದ
ತೊದಲ ಉಲಿಗಳನಾಡಿ ಕುಣಿಯುತಿಹುದು
ಮತ್ತಾವ ಪದ್ಯಗಳು ಬೇಕೆಮಗೆ ನಮಗಿಂದು
ಕತ್ತಲೆಯ ಕರಗಿಸುವ ‘ಕಾ’ಗುಣಿತವಿರಲು
ಎತ್ತಲೋ ಮರೆಯಾದ ಹೊತ್ತನೆಳೆದೈತಂದು
ಸುತ್ತಲೂ ದಿವ್ಯತೆಯ ನೀವು ಬಿತ್ತಿರಲು
ಡಿ.ನಂಜುಂಡ
24/01/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ