ಗೊಜ್ಜೂಡಿದವಲಕ್ಕಿ ಜೊತೆಗೂಡಿದುಪ್ಪಿಟ್ಟು
ಮೇಲಾರು ರವೆಯುಂಡೆಗಳನು ಮುಕ್ಕಿ
ಹೆಸರುಬೇಳೆಯ ಪಾಯಸಾಕಂಠಪರ್ಯಂತ
ಕುಡಿದು ನಾಲಿಗೆಯಲ್ಲಿ ತಟ್ಟೆ ನೆಕ್ಕಿ
ಅನ್ನವನು ತಿನ್ನೆನಾನಿಂದೆನೆಗೆ ಶಿವರಾತ್ರಿ
ಯೆಂದನ್ಯ ಚರ್ಪುಗಳ ಮೇಲ್ಮೇಲೆ ಮೆಂದು
ಮೊಗದ ಹೊತ್ತಿಗೆ ತುಂಬ ಶಿವನ ಪಟಗಳ ತೂರಿ
ಕೃತಾರ್ಥರಾಗೋಣ ಬನ್ನಿ ನೀವಿಂದು
ತಿಳಿಹಾಸ್ಯದಾ ಹೊನಲ ತಲೆಮೇಲೆ ತಾ ಹೊತ್ತು
ಕುತ್ತಿಗೆಯ ಮುಂದಕ್ಕೆ ಚಾಚಿ ಕುಳಿತಿಹನು
ಗಣಪತಿಯ ಪ್ರತಿರೂಪ ಗಣಕಯಂತ್ರದ ಮುಂದೆ
ಮೂಷಕವನಾಡಿಸುತ ನಕ್ಕು ನಲಿಯುವನು
ಇಂತಿರಲು ಶಿವಲೀಲೆ ಶಿವರಾತ್ರಿಯಾಚರಿಸಿ
ಅಪರಾತ್ರಿಯಂಚಿನಲಿ ಮಲಗಿ ಧ್ಯಾನಿಸಿರಿ
ಮರುದಿನದ ಮಧ್ಯಾಹ್ನದನ್ನ ಬೇಯುವ ಸದ್ದು
ಕೇಳಿದೊಡನೆಚ್ಚೆತ್ತು ಊಟಗೈಯುವಿರಿ
ಎಲ್ಲವೂ ಶಿವಮಯವು ಎಂದು ತಿಳಿಯುವಿರಿ
ಡಿ.ನಂಜುಂಡ
07/03/2016
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ