ಭಾನುವಾರ, ಫೆಬ್ರವರಿ 21, 2016

ಕಾಲಹರಣವದೇತಕೆ?

ಎನ್ನ ಚುಂಬಿಸಿ ಪುಳಕಗೊಳಿಸದೆ
ಕಾಲಹರಣವ ಗೈದರೆ?
ಅಧರಚುಂಬನ ಬಲು ರೋಮಾಂಚನ-
ವೆಂದು ಕವಿತೆಯ ಬರೆದರೆ?

ಏನ ಹೇಳಲಿ ನಿನಗೆ ನಲ್ಲನೆ!
ರಸಿಕನಲ್ಲದ ಜೀವನೆ!
ಭಾವಮೋಚನಕೆಂದು ಗೀಚುತ
ತಾನು ಪಂಡಿತಕವಿಯೆನೆ

ಹೂವ ಸುತ್ತುತಲಿರುವ ದುಂಬಿಯು
ಜೇನ ಸವಿಯದ ಹಾಗಿದೆ
ಹೂವ ಗಂಧವ ತೀಡಿ ಬಂದಿಹ
ಗಾಳಿಯಂತೆಯೆ ಸಾಗಿದೆ

ಬಾಳಗವಿತೆಯ ರಸವನರಿಯದೆ
ನೀಳಗವಿತೆಯದೇತಕೆ?
ಕೋಲ ಹಿಡಿದು ಕಡಲಿನಾಳವ
ಅಳೆಯುತಿರುವುದದೇತಕೆ?

ಡಿ.ನಂಜುಂಡ

21/02/2016

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ